ಕಾರ್ಕಳ, ಜು 11(DaijiworldNews/MS): ಬೋಳ ಗ್ರಾಮದ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನಕ್ಕೆ ಭಾನುವಾರ ರಾತ್ರಿ ನುಗ್ಗಿದ್ದ ಕಳ್ಳರು ದೇವಸ್ಥಾನದ ಅಮೂಲ್ಯ ವಸ್ತುಗಳನ್ನು ಕಳವುಗೈದಿದ್ದಾರೆ.
ದೇವಸ್ಥಾನದ ಹಿಂಬದಿಯ ಬಾಗಿಲು ಒಡೆದು ಕಳವು ಕೃತ್ಯಗೈಯಲಾಗಿದೆ. ದೇವಸ್ಥಾನದ ಲಾಕರ್ ಒಡೆಯುವ ವಿಫಲ ಪ್ರಯತ್ನ ನಡೆಸಿದ್ದಾರೆ. ಇದಲ್ಲದೆ ಸಿಸಿ ಕ್ಯಾಮೆರಾದ ಡಿ ವಿ ಆರ್ ನ್ನೇ ಕದ್ದೊಯ್ಯಿದಿದ್ದು ಪಂಚಲೋಹದ ಬಲಿಮೂರ್ತಿ ಸೇರಿದಂತೆ ಲಕ್ಷಾಂತರ ರೂಪಾಯಿಯ ವಸ್ತುಗಳನ್ನು ಕಳವು ಮಾಡಲಾಗಿದೆ.
ಎಂದಿನಂತೆ ಸೋಮವಾರ ಬೆಳಿಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕಾರ್ಕಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.