ಕಾಪು, ಜು 11 (DaijiworldNews/HR): ಕರಾವಳಿ ಭಾಗದ ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆಯ ಅಗತ್ಯವಿದೆ. ಆದರೆ ಸಿಆರ್ ಝಡ್ ಮತ್ತು ಇನ್ನಿತರ ಕಾರಣಗಳಿಂದಾಗಿ ಇದು ವಿಳಂಬ ಆಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಮತ್ತು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಂಜೆ ತಿಳಿಸಿದ್ದು, ಕಾಪು ತಾಲೂಕಿನಲ್ಲಿ ಕಡಲ್ಕೊರೆತ ಕಂಡು ಬಂದ ಮೂಳೂರುವಿನ ತೊಟ್ಟಂ ಪ್ರದೇಶಕ್ಕೆ ಭೇಟಿ ನೀಡಿ ಅವರು ಪರಿಸ್ಥಿತಿಯ ಅವಲೋಕನ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, "ಉಡುಪಿಯಲ್ಲಿ ಆರಂಭದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿತ್ತು. ಆದರೆ ಕಳೆದ 10 ದಿನಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ಇದರಿಂದಾಗಿ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಏಳು ಮನೆಗಳು ಕುಸಿದಿದೆ, 30 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪ್ರತಿ ವರ್ಷ ಸಮುದ್ರ ಜಮೀನನ್ನು ಕೊರೆಯುತ್ತಿದೆ. ಪ್ರತಿ ವರ್ಷದಂತೆ ಕಡಲ್ಕೊರೆತ ತಡೆಗಟ್ಟಲು ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ ತಡೆಗೂಡೆ ಇದ್ದಲ್ಲೂ ಕೆಲವು ಕಡೆಗಳಲ್ಲಿ ಈ ಬಾರಿ ನೀರು ನುಗ್ಗಿದೆ. ಇದಕ್ಕೆ ಶಾಶ್ವತವಾದ ತಡೆಗೋಡೆ ನಿರ್ಮಾಣ ಆಗಬೇಕು. ಸಿಆರ್ಝುಡ್ ಸಮಸ್ಯೆ ಇರುವ ಕಾರಣ ಕೆಲವು ಕೆಲಸಗಳು ಬಾಕಿ ಇದೆ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಸುಮಾರು 30 ಕೋಟಿ ರುಪಾಯಿ ಹಾನಿ ಉಂಟಾಗಿದೆ. ಇದಕ್ಕೆ ಬೇಕಾದ ಹಣ ನೀಡುವಲ್ಲಿ ಸಿಎಂ ಹಾಗೂ ಕಂದಾಯ ಸಚಿವರಲ್ಲಿ ಈಗಾಗಲೇ ಮಾತನಾಡಿದ್ದೇನೆ. ಹಂತ ಹಂತವಾಗಿ ಹಣ ನೀಡುವ ಭರವಸೆ ನೀಡಿದ್ದಾರೆ. ಕೃಷಿ ಹಾನಿ ಎಷ್ಟಾಗಿದೆ ಎಂಬುವುದನ್ನು ಈಗ ಅಂದಾಜಿಸಲು ಆಗುವುದಿಲ್ಲ. ನೀರು ಇಳಿದ ಬಳಿಕ ಇದರ ಕುರಿತಾಗಿ ಸರ್ವೇ ಮಾಡಲಾಗವುದು. ಅತ್ಯಂತ ಪ್ರಾಮಾಣಿಕವಾಗಿ ಮತ್ತು ಶೀಘ್ರವಾಗಿ ಪರಿಹಾರ ನೀಡಬೇಕು ಎಂದು ಸೂಚಿಸಿದ್ದೇನೆ" ಎಂದರು.
ಖಾಸಗಿ ರೆಸಾರ್ಟ್ ಬಳಿ ಸೂಕ್ತ ರೀತಿಯಲ್ಲಿ ತಡೆಗೋಡೆ ಕಾಮಗಾರಿ ನಿರ್ವಹಿಸಿದ್ದು ಸಾಮಾನ್ಯ ಜನರ ಮನೆಗಳ ಬಳಿ ಅಪೂರ್ಣ ಕಾಮಗಾರಿ ನಡೆಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಯಾರಿಗೂ ತೊಂದರೆ ಆಗಬಾರದು ಎಂಬ ಉದ್ದೇಶ ನಮ್ಮದು. ಇಷ್ಟೊಂದು ದೊಡ್ಡ ಸಮುದ್ರಕ್ಕೆ ತಡೆಗೋಡೆ ನಿರ್ಮಾಣಕ್ಕೆ ಬಹಳ ದೊಡ್ಡ ಪ್ರಮಾಣದ ಹಣ ಕೂಡಾ ಅಗತ್ಯ ಇದೆ. ಯಾವುದೇ ವ್ಯವಸ್ಥೆ ಇದನ್ನು ದುರುಪಯೋಗಪಡಿಸಿದರೆ ಅವರ ವಿರುದ್ದ ಕಠಿಣ ಕ್ರಮ ಜಿಲ್ಲಾಡಳಿತ ತೆಗೆದುಕೊಳ್ಳುತ್ತೆ. ಎಲ್ಲರನ್ನೂ ಉಳಿಸುವುದು ನಮ್ಮ ಆದ್ಯತೆ" ಎಂದಿದ್ದಾರೆ.
ನೆರೆ ಹಾವಳಿ ಪೀಡಿತ ಉಡುಪಿ ಜಿಲ್ಲೆಯ ಗಿಳಿಯಾರು ಗ್ರಾಮದ ಪ್ರದೇಶಕ್ಕೆ ಕೂಡಾ ಸಚಿವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.