ಉಡುಪಿ, ಜು 11(DaijiworldNews/MS): ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಜಿಲ್ಲೆಯಾದ್ಯಂತ ಇರುವ ನದಿಗಳು ತುಂಬಿ ಹರಿಯತ್ತಿವೆ. ಮೂಡುಬೆಳ್ಳೆಯ ಕಟ್ಟಿಂಗೇರಿ ಸಮೀಪ ಹರಿಯುವ ಪಾಪನಾಶಿನಿ ನದಿಯ ನೀರು ಕೃಷಿ ಭೂಮಿಗೆ ನುಗ್ಗಿದ್ದು ಕೃಷಿಕರು ಬೆಳೆ ನಾಶದ ಆತಂಕವನ್ನು ಎದುರಿಸುತಿದ್ದಾರೆ.
ಸುಮಾರು ೮ ದಿನಗಳಿಂದ ಗದ್ದೆಗಳು ನೀರಿನಿಂದ ಆವೃತ್ತವಾಗಿವೆ. ಈ ಮೊದಲು ಕೂಡಾ ನಿರಂತರವಾಗಿ ಮಳೆ ಬಂದ ಸಂಧರ್ಬದಲ್ಲಿ ಗದ್ದೆ ಗಳಿಗೆ ನೀರು ಬರುತಿದ್ದರೂ ಕೂಡಾ ಎರಡು ದಿನಗಳಲ್ಲಿ ಮಳೆ ನೀರು ಇಳಿದು ಹೋಗುತಿತ್ತು. ಗದ್ದೆಗೆ ನದಿ ನೀರು ನುಗ್ಗಿರುವ ಪರಿಣಾಮ ರೈತರು ಬೆಳೆ ನಾಶವಾಗುವ ಭೀತಿಯಲ್ಲಿದ್ದಾರೆ.
"ಕುರ್ಕಾಲು ಕಿಂಡಿ ಅಣೆಕಟ್ಟನ್ನು ಈ ಬಾರಿ ಸುಮಾರು 6 ಅಡಿ ಎತ್ತರ ಮಾಡಿದ್ದಾರೆ ಮಾತ್ರವಲ್ಲದೇ ಅದರ ಕಿಂಡಿಯನ್ನು ಕೂಡಾ ಹತ್ತಿರ ಹತ್ತಿರ ನಿರ್ಮಿಸಲಾಗಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಿಸುವಾಗ ನಿರ್ಮಿಸಿದ ಪರ್ಯಾಯ ರಸ್ತೆಯನ್ನು ಸೇತುವೆ ಕಾಮಗಾರಿ ಮುಗಿದರೂ ಕೂಡಾ ತೆರವು ಮಾಡದೇ ಇರುವುದರಿಂದ ಕೂಡಾ ನೀರಿನ ಹರಿವಿಗೆ ಸಮಸ್ಯೆಯಾಗಿದೆ" ಎಂದು ಸ್ಥಳೀಯರು ಕೃಷಿಕರು ದೂರಿದ್ದಾರೆ.
ಕಟ್ಟಿಂಗೇರಿಯ ಹಿರಿಯ ಕೃಷಿ ಕ ಭಾಸ್ಕರ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಕಟ್ಟಿಂಗೇರಿ, ಪ್ರಗತಿಪರ ಕೃಷಿಕ ಸಂತೋಷ್ ಶೆಟ್ಟಿ ಪಂಜಿಮಾರು ಸ್ಥಳಕ್ಕೆ ಭೇಟಿ ನೀಡಿ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಲು ಒತ್ತಾಯಿಸಿದರು