ಉಪ್ಪುಂದ, ಜು 11(DaijiworldNews/MS): ಉಪ್ಪುಂದ ಗ್ರಾಮದ ಮೂಡುಗಣಪತಿ ದೇವಸ್ಥಾನದ ಬಳಿಯ ಮೊಬೈಲ್ ಅಂಗಡಿಯೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕೃತ್ಯ ನಡೆದ ಮೂರು ದಿನದಲ್ಲಿ ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದರು.
ಭಟ್ಕಳ ಮುರುಡೇಶ್ವರ ಮಾವಳ್ಳಿಯ ನಿವಾಸಿಗಳಾದ ಮೊಹಮ್ಮದ್ ಇಫ್ಜಲ್ (27), ಮಹಮ್ಮದ್ ಅಸೀಮ್ ಡೊನ್ನಾ (20), ಮಹಮ್ಮದ್ ರಫಿ (21) ಹಾಗೂ ಭಟ್ಕಳದ ಮೊಹಮ್ಮದ್ ರಾಹಿಕ್ (22) ಬಂಧಿತರು. ಮುರ್ಡೇಶ್ವರ ಬೀಚ್ ಬಳಿ ಆರೋಪಿಗಳನ್ನು ಬಂಧಿಸಿದ್ದು ಇವರಿಂದ ಕಳವು ಮಾಡಿದ 20 ಸಾವಿರ ಮೌಲ್ಯದ ಮೊಬೈಲ್ ಪೋನುಗಳು, ಕೃತ್ಯಕ್ಕೆ ಉಪಯೋಗಿಸಿದ 8 ಲಕ್ಷ ಮೌಲ್ಯದ ಕಾರು ಮೊದಲಾದವುಗಳನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ
ಬಿಜೂರು ನಿವಾಸಿ ಪ್ರಶಾಂತ್ ಅವರ ಮೊಬೈಲ್ ಅಂಗಡಿಯಲ್ಲಿ ಜು.5 ರಂದು ರಾತ್ರಿ ಅಂಗಡಿಯ ಶೆಟರ್ ಮುರಿದು ಕಳ್ಳತನ ಮಾಡಲಾಗಿತ್ತು. ಅಂಗಡಿಯಲ್ಲಿದ್ದ 3500 ರೂ. ನಗದು, 25 ಸಾವಿರ ರೂ. ಬೆಲೆಬಾಳುವ 17 ಕೀ ಪ್ಯಾಡ್ ಮೊಬೈಲ್ ಪೋನುಗಳು ಹಾಗೂ 5 ಸಾವಿರ ರೂ. ಮೌಲ್ಯದ ಮೊಬೈಲ್ ಗೆ ಉಪಯೋಗಿಸುವ ಪವರ್ ಬ್ಯಾಂಕ್ ಹಾಗೂ ಬ್ಲೂಟೂತ್ ಕಳವುಗೈದಿದ್ದು ಈ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 33,500 ರೂ. ಆಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.