ಬಂಟ್ವಾಳ, ಜು 10(DaijiworldNews/SM): ಪಂಜಿಕಲ್ಲಿನ ಮುಕುಡ ಎಂಬಲ್ಲಿ ಜುಲೈ 6ರಂದು ಉಂಟಾದ ಭೂಕುಸಿತದಿಂದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಹಸಿರಾಗಿರುವಂತೆಯೇ, ಅದೇ ಸ್ಥಳದಲ್ಲಿ ಭಾನುವಾರ ಸಂಜೆ ಮತ್ತೆ ಭೂಕುಸಿತ ಉಂಟಾಗಿದ್ದು ತಾಲೂಕು ಆಡಳಿತ ಹಾಗೂ ಗ್ರಾಮಪಂಚಾಯತ್ ಆಡಳಿತದ ಸಮಯಪ್ರಜ್ಞೆಯಿಂದ ಸ್ಥಳದಲ್ಲಿದ್ದ ನಾಲ್ವರು ಪಾರಾಗಿದ್ದಾರೆ.
ಮುಕ್ಕುಡದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಘಟನೆಯಲ್ಲಿ ಮೂವರು ಕೇರಳ ಮೂಲದ ನಿವಾಸಿಗಳು ಸಾವನ್ನಪ್ಪಿದ್ದರು. ರವಿವಾರ ರಜಾ ದಿನವಾದ ಹಿನ್ನೆಲೆಯಲ್ಲಿ ದುರಂತದ ಸ್ಥಳವೀಕ್ಷಣೆಗೆ ಸ್ಥಳೀಯರು ಮಾತ್ರವಲ್ಲದೆ ದೂರದಿಂದಲೂ ತುಂಬಾ ಜನಬರುತ್ತಿದ್ದರು. ಈ ಕುರಿತಾಗಿ ಸ್ಥಳೀಯರು ಗ್ರಾಮಪಂಚಾಯತ್ ಗೆ ದೂರು ನೀಡಿದ್ದು, ಅವರು ತಾಲೂಕು ತಹಶೀಲ್ದಾರ್ ಡಾ.ಸ್ಮಿತಾರಾಮು ರವರ ಗಮನಕ್ಕೆ ತಂದರು.
ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಸಾರ್ವಜನಿಕರು ಕುಸಿತದ ಸ್ಥಳವನ್ನು ವೀಕ್ಷಿಸುತ್ತಿದ್ದ ದೃಶ್ಯಗಳನ್ನು ಗಮನಿಸಿ ಪೊಲೀಸ್ ಇಲಾಖೆ ಹಾಗೂ ಗ್ರಾ.ಪಂ. ಗೆ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ದೇಶನ ನೀಡಿದರು.
ಈ ಕುರಿತು ಸ್ಪಂದಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ, ಪಿಡಿಓ ವಿದ್ಯಾಶ್ರೀ ಯವರ ಸೂಚನೆಯಂತೆ ಸ್ಥಳೀಯ ಸದಸ್ಯರಾದ ಮೋಹನ್ ದಾಸ್, ತುರ್ತು ಸೇವಾ ತಂಡದ ಸದಸ್ಯರಾದ ಯಶವಂತ್ ಜೋರಾ ಹಾಗೂ ಆರಕ್ಷಕ ಸಿಬ್ಬಂದಿ ಶೇಖರ್, ಮಹೇಂದ್ರ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ಸಂದರ್ಭ ಬೊಲೆರೋ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದ ನಾಲ್ವರು ಭೂಕುಸಿತದ ಸ್ಥಳ ವೀಕ್ಷಿಸುತ್ತಿದ್ದರು.
ಪೊಲೀಸ್ ಸಿಬ್ಬಂದಿಗಳು ನಾಲ್ವರಿಗೂ ಗದರಿಸಿ, ಸ್ಥಳದಿಂದ ತೆರಳುವಂತೆ ಸೂಚಿಸಿದರು. ಅದರಂತೆ ನಾಲ್ವರು ಅಲ್ಲಿಂದ ತೆರಳಲು ತಮ್ಮ ವಾಹನದತ್ತ ತೆರಳುತ್ತಿದ್ದಂತೆಯೇ ಭೂ ಕುಸಿತ ಉಂಟಾಗಿ,ಅಷ್ಟು ಹೊತ್ತು ಅವರು ನಿಂತಿದ್ದ ಸ್ಥಳಕ್ಕೆ ಮಣ್ಣು ಆವರಿಸಿದೆ. ಒಟ್ಟಿನಲ್ಲಿ ತಾ.ಆಡಳಿತ ಹಾಗೂ ಗ್ರಾ.ಪಂ.ಆಡಳಿತದ ಸಮಯ ಪ್ರಜ್ಞೆಯಿಂದ ಸಂಭಾವ್ಯ ದುರಂತವೊಂದು ತಪ್ಪಿದಂತಾಗಿದೆ.