ಉಡುಪಿ, ಜು 10 (DaijiworldNews/HR): ನಿರಂತರ ಸುರಿಯುತ್ತಿರುವ ಭಾರಿ ಮಳೆಯ ಮಧ್ಯೆಯೂ ಉಡುಪಿ ಜಿಲ್ಲೆಯಾದ್ಯಂತ ಇಂದು ಬಕ್ರೀದ್ ಹಬ್ಬ (ಈದುಲ್ ಹಝಾ) ವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಮುಸ್ಲಿಂ ಬಾಂಧವರು ಬೆಳಿಗ್ಗೆ ತಮ್ಮ ವ್ಯಾಪ್ತಿಯ ಮಸೀದಿಗಳಿಗೆ ತೆರಳಿ ವಿಶೇಷ ನಮಾಜ್ ನಿರ್ವಹಿಸಿದರು ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು
ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯ ಖತೀಬ್ ಹಾಫೀಳ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ಮಾಡಲಾಯಿತು.
ಕುಂದಾಪುರ ಜುಮಾ ಮಸೀದಿಯ ಧರ್ಮಗುರು ಮೌಲಾನ ಮುಫ್ತಿ ಸದ್ದಾಂ ನೇತೃತ್ವದಲ್ಲಿ, ಕಾರ್ಕಳ ಜಾಮೀಯ ಮಸೀದಿಯ ಮೌಲಾನ ಜಾಹಿರ್ ಅಹ್ಮದ್ ಅಲ್ಕಾಸ್ಮಿ ಹಾಗೂ ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸೀದಿಯ ಮೌಲಾನ ಅಹ್ಮದ್ ಶರೀಫ್ ಸಅದಿ ಈದ್ ನಮಾಝ್ ನ ನೇತೃತ್ವ ವಹಿಸಿದ್ದರು.
ಅದೇ ರೀತಿ ಬೈಂದೂರು ಬ್ರಹ್ಮಾವರ ಹೆಬ್ರಿ ಕಾರ್ಕಳ ಕಾಪು ಸೇರಿದಂತೆ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ನಡೆದ ಹಬ್ಬದ ವಿಶೇಷ ನಮಾಜ್ ನಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಉಡುಪಿ ಬ್ರಹ್ಮಗಿರಿ ನಾಯರ್ ಕೆರೆಯ ಹಾಶಿಮಿ ಮಸೀದಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶದೊಂದಿಗೆ ಈದ್ ಆಚರಿ ಲಾಯಿತು. ಮೌಲಾನಾ ಸೈಯದ್ ಹುಸೇನ್ ತಮ್ಮ ಈದ್ ಸಂದೇಶದಲ್ಲಿ ಮುಸ್ಲಿಂ ಬಾಂಧವರು ಸಾಮಾಜಿಕ ಮಾಧ್ಯಮವನ್ನು ನಂಬಬಾರದು ಮತ್ತು ಅವಲಂಬಿಸಬಾರದು. ಬದಲಿಗೆ ಸಕಾರಾತ್ಮಕ ಮತ್ತು ರಚನಾತ್ಮಕ ಚಟುವಟಿಕೆಗಳತ್ತ ಗಮನಹರಿಸಿ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಿದರು.
ಇನ್ನು ಬೈಂದೂರಿನ ಗಂಗೋಲಿಯಲ್ಲಿ ಕೂಡ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.