ಕುಂಬಳೆ, ಜು 10 (DaijiworldNews/DB): ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿದ ಪರಿಣಾಮ ಹಿಂದಿನಿಂದ ಬಂದ ಬೈಕ್ ಹಾಗೂ ಬಸ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬಸ್ನಡಿ ಸಿಲುಕಿ ಮೃತಪಟ್ಟಿರುವ ಘಟನೆ ಕುಂಬಳೆಯಲ್ಲಿ ಸಂಭವಿಸಿದೆ.
ಈಟಿತಟ್ ನಿವಾಸಿ, ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಕಪ್ಪಲ್ ಮಾಕೆಲ್ ಜೋಶಿ (45) ಮೃತ ವ್ಯಕ್ತಿ. ಇಲ್ಲಿನ ಮಲೆನಾಡ ಹೆದ್ದಾರಿಯ ಕಾಟ್ಟುಂಕವಲ ಚುರುತ್ತಿಲ್ನಲ್ಲಿ ಶನಿವಾರ ಬೆಳಗ್ಗೆ ಘಟನೆ ಸಂಭವಿಸಿದೆ. ಗಾಳಿ ಮಳೆಗೆ ಕೆಲ ದಿನಗಳ ಹಿಂದೆ ರಸ್ತೆಯ ಒಂದು ಭಾಗ ಕುಸಿತಕ್ಕೊಳಗಾಗಿರುವುದರಿಂದ ವಾಹನ ಸಂಚಾರವನ್ನು ಬಂದ್ ಮಾಡಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಇಲ್ಲಿ ಬಸ್ ಏರಲು ಪ್ರಯಾಣಿಕರು ಎತ್ತರದ ಪ್ರದೇಶದಲ್ಲಿ ನಿಂತಿದ್ದರು.
ಬಸ್ ಎತ್ತರದ ಪ್ರದೇಶದಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡುವಾಗ ಮುಂದೆ ಹೋಗದೆ ಹಿಂದಕ್ಕೆ ಚಲಿಸಿದೆ. ಇದರಿಂದಾಗಿ ಹಿಂದೆ ಇದ್ದ ಬೈಕ್ ಮತ್ತು ಬಸ್ಗೆ ಡಿಕ್ಕಿಯಾಗಿದ್ದು, ಬೈಕ್ ಸವಾರ ಬಸ್ನಡಿಗೆ ಸಿಲುಕಿದ್ದಾರೆ. ತತ್ಕ್ಷಣ ಆತನನ್ನು ಸ್ಥಳೀಯರು ಹೊರಗೆಳೆದು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಆತ ಕೊನೆಯುಸಿರೆಳೆದಿದ್ದಾರೆ.