ಕಾಸರಗೋಡು, ಜು 10 (DaijiworldNews/DB): ಬೇಕಲ ರೆಸಾರ್ಟ್ನಿಂದ ಸುಮಾರು ಆರು ಲಕ್ಷ ರೂ. ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೆಸಾರ್ಟ್ ಸಿಬಂದಿಗಳಾಗಿದ್ದ ಚಿತ್ರದುರ್ಗ ನಿವಾಸಿಗಳಾದ ದಂಪತಿಯನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ಪ್ರದೀಪ್ ( 25) ಮತ್ತು ಪತ್ನಿ ನಿವೇದಿತಾ ( 24) ಬಂಧಿತರು. ಬೇಕಲ ಕಾಫಿಲ್ ಬೀಚ್ ರಸ್ತೆಯ ಬೇಕಲ ಹೋಂ ಸ್ಟೇ ರೆಸಾರ್ಟ್ನಿಂದ ದಂಪತಿಗಳು ಸೇರಿ ನಗದು ಕಳವುಗೈದಿದ್ದರು. ರೆಸಾರ್ಟ್ನ ರಿಸೆಪ್ಶನ್ ಕೊಠಡಿಯ ಕಪಾಟಿನಲ್ಲಿರಿಸಲಾಗಿದ್ದ ನಗದು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಈ ಬಗ್ಗೆ ಬೇಕಲ ಠಾಣಾ ಪೊಲೀಸರಿಗೆ ರೆಸಾರ್ಟ್ ಮಾಲಕ ಕೆ.ಕೆ. ಪ್ರದೀಪ್ ದೂರು ನೀಡಿದ್ದರು. ಸಿಬಂದಿಗಳೇ ಈ ಕಳವು ನಡೆಸಿರಬಹುದು ಎಂದು ಸಂಶಯಿಸಲಾಗಿತ್ತು. ಈ ನಡುವೆ ಇಬ್ಬರು ರೆಸಾರ್ಟ್ನಿಂದ ತಲೆ ಮರೆಸಿಕೊಂಡಿದ್ದರು. ಬೇಕಲ ಠಾಣಾ ಸಬ್ ಇನ್ಸ್ ಪೆಕ್ಟರ್ ಎಂ. ರಜನೀಶ್ ಹಾಗೂ ಎ ಎಸ್ ರಾಜನ್ ನೇತೃತ್ವದಲ್ಲಿ ನಡೆಸಿದ ತನಿಖೆಯಿಂದ ಚಿತ್ರದುರ್ಗದಿಂದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವು ಬಳಿಕ ಊರಿಗೆ ಪರಾರಿಯಾಗಿದ್ದ ಇವರನ್ನು ಮೊಬೈಲ್ ಲೊಕೇಶನ್ ಮೂಲಕ ಪತ್ತೆ ಹಚ್ಚಿ ಬಂಧಿಸಲಾಯಿತು. ಕಳವುಗೈದ ಆರು ಲಕ್ಷ ರೂ.ಗಳಲ್ಲಿ 2. 10 ಲಕ್ಷ ರೂ. ನೀಡಿ ಒಂದು ಹೊಸ ಬೈಕ್ ಹಾಗೂ ಎರಡು ಮೊಬೈಲ್ ಫೋನ್ನ್ನು ಖರೀದಿಸಿದ್ದರು. ತನಿಖಾ ತಂಡ ವಶಪಡಿಸಿಕೊಂಡ ಬೈಕ್ನ್ನು ಚಿತ್ರದುರ್ಗ ಪೊಲೀಸ್ ಠಾಣೆ ಯ ಕಸ್ಟಡಿ ಯಲ್ಲಿರಿಸಲಾಗಿದೆ. ಇಬ್ಬರನ್ನು ಬೇಕಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.