ಬಂಟ್ವಾಳ, ಜು 10 (DaijiworldNews/DB): ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, 8.5 ಮಿ. ಎತ್ತರದಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಶನಿವಾರ ಬೆಳಗ್ಗೆ ನೀರಿನ ಮಟ್ಟದಲ್ಲಿ ಇಳಿಕೆ ಕಂಡು ಬಂದಿದ್ದು, 6.3 ಮಿ.ಎತ್ತರದಲ್ಲಿ ಹರಿಯುತ್ತಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ನೇತ್ರಾವತಿ ನದಿ ತುಂಬಿ ಹರಿಯಲು ಪ್ರಾರಂಭಿಸಿದೆ. ಬಾರಿ ವೇಗವಾಗಿ ನೀರು ಹರಿಯುತ್ತಿದ್ದು ರಾತ್ರಿ ವೇಳೆ ನೀರಿನ ಮಟ್ಟದಲ್ಲಿ ಇನ್ನಷ್ಟು ಏರಿಕೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಹೇಳಲಾಗಿದ್ದು ಬೆಳಿಗ್ಗೆ 6 ಗಂಟೆಯ ವೇಳೆಗೆ 8.5 ಮಿ.ಎತ್ತರದಲ್ಲಿ ಅಪಾಯದ ಮಟ್ಟವನ್ನು ತಲುಪಿದೆ. ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಉಪ್ಪಿನಂಗಡಿಯಲ್ಲೂ ನದಿ ನೀರಿನ ಮಟ್ಟ ಏರಿಕೆಯಾಗಿದೆ.
ತಗ್ಗು ಪ್ರದೇಶಗಳು ಜಲಾವೃತ
ಬಂಟ್ವಾಳ ನೇತ್ರಾವತಿ ನದಿ ತೀರದ ಎಲ್ಲಾ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ನದಿ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಪಾಣೆ ಮಂಗಳೂರು, ಕಂಚಿಕಾರ್ ಪೇಟೆ, ಜಕ್ರಿಬೆಟ್ಟು, ಕೈಕುಂಜೆ ಬಸ್ತಿಪಡ್ಪು ಮುಂತಾದ ಅನೇಕ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಪಾಣೆ ಮಂಗಳೂರು ಮತ್ತು ಕಂಚಿಕಾರ್ ಪೇಟೆಯ ರಸ್ತೆಗೆ ನೀರು ಬಂದಿದೆ. ರಾತ್ರಿ ವೇಳೆ ಅತಿಯಾದ ಗಾಳಿ ಮಳೆಗೆ ನೀರಿನ ಮಟ್ಟ ಏರಿಕೆಯಾಗಿದೆ .
ತಹಶೀಲ್ದಾರ್ ಸ್ಮಿತಾರಾಮು , ಪೋಲಿಸ್ ಇನ್ಸ್ಪೆಕ್ಟರ್ ಗಳಾದ ಟಿ.ಡಿ. ನಾಗರಾಜ್, ವಿವೇಕಾನಂದ, ಎಸ್.ಐ.ಗಳಾದ ಅವಿನಾಶ್, ಹರೀಶ್, ಮೂರ್ತಿ ಅವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ನೆರೆ ಬರುವ ಬಗ್ಗೆ ಮುನ್ಸೂಚನೆ ಇದ್ದ ಕಾರಣ ತಾಲೂಕು ಆಡಳಿತ ಸಂಪೂರ್ಣ ಸಜ್ಜಾಗಿದೆ. ಇದರ ಜೊತೆ ಸ್ಥಳೀಯ ಬೋಟ್ ಹಾಗೂ ಮುಳುಗು ತಜ್ಞರು ಅಗ್ನಿಶಾಮಕ ದಳ ಸಂಪೂರ್ಣ ಸಜ್ಜಾಗಿ ನಿಂತಿದೆ.