ಮಂಗಳೂರು, ಜು 09 (DaijiworldNews/HR): ಕಳೆದೆರಡು ವಾರಗಳಿಂದ ಸುರಿದ ಭಾರೀ ಮಳೆ ಎಲ್ಲರನ್ನು ಸಂಕಷ್ಟಕ್ಕೆ ದೂಡಿದ್ದು, ಮಂಗಳೂರಿನಲ್ಲಿ ರಸ್ತೆಗಳು ಮುಳುಗಡೆಯಾಗಿದ್ದು, ಹಲವು ಮನೆಗಳು ಕುಸಿದಿವೆ.
ಮರಕಡ ದೇವಂದ ಗುಡ್ಡೆಯಲ್ಲಿ ವಾಸಿಸುತ್ತಿರುವ ಜಯಂತಿ ಅವರ ಮನೆ ಕುಸಿದು ಬಿದ್ದಿದ್ದು, ಅವರ ಕುಟುಂಬದವರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಜಯಂತಿ ತನ್ನ ಪತಿ ಮನೋಜ್ ಮತ್ತು 5ನೇ ತರಗತಿಯಲ್ಲಿ ಓದುತ್ತಿರುವ ಮಗುವಿನೊಂದಿಗೆ ವಾಸಿಸುತ್ತಿದ್ದಾರೆ.
ಜುಲೈ 8ರ ಶುಕ್ರವಾರ ರಾತ್ರಿ ಮನೆಯ ಒಂದು ಬದಿ ಕುಸಿದು ಬಿದ್ದಿದ್ದು, ಉಳಿದ ಭಾಗ ಕುಸಿಯುವ ಹಂತದಲ್ಲಿದೆ. ಮನೆ ಸಾಕಷ್ಟು ಹಳೆಯದಾಗಿದ್ದು, ಮಣ್ಣಿನಿಂದ ಮಾಡಲಾಗಿರುವುದರಿಂದ ಅವರು ಮಲಗಿರುವಾಗ ಯಾವಾಗ ಬೇಕಾದರೂ ಮನೆ ಕುಸಿದು ಬೀಳಬಹುದು ಎಂಬ ಆತಂಕದಿಂದ ಜಯಂತಿ ಮತ್ತು ಅವರ ಕುಟುಂಬ ನಿನ್ನೆ ರಾತ್ರಿ ತಮ್ಮ ನೆರೆಹೊರೆಯವರ ಮನೆಯಲ್ಲಿ ತಂಗಿದ್ದರು.
ಇನ್ನು ಮನೋಜ್ ಮೇಸ್ತ್ರಿಯ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಒಂದು ತಿಂಗಳಿನಿಂದ ಕೆಲಸವಿಲ್ಲ. ಅವರ ಪತ್ನಿ ಆರೋಗ್ಯ ಸಮಸ್ಯೆಯಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಪರಿಸ್ಥಿತಿಯಿಂದಾಗಿ ಕುಟುಂಬವು ತಮ್ಮ ಮನೆಯನ್ನು ನವೀಕರಿಸುವ ಸ್ಥಿತಿಯಲ್ಲಿಲ್ಲ. ಮನೆಯ ಪರಿಸ್ಥಿತಿಯಿಂದಾಗಿ ಕುಟುಂಬ ಭಯದಿಂದಲೇ ಜೀವನ ನಡೆಸುತ್ತಿದೆ.