ಮಂಗಳೂರು, ಜು 09 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಿಂದ ಅಮರನಾಥ ಕ್ಷೇತ್ರ ಯಾತ್ರೆ ಕೈಗೊಂಡು ಅಪಾಯಕ್ಕೆ ಸಿಲುಕಿದ್ದರೆ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 1077 ಕರೆ ಮಾಡಿ ಸಂಬಂಧಪಟ್ಟ ಯಾತ್ರಾರ್ಥಿಗಳ ವಿವರ ನೀಡುವಂತೆ ದ.ಕ.ಜಿಲ್ಲಾಡಳಿತ ಮನವಿ ಮಾಡಿದೆ.
ಪವಿತ್ರ ಕ್ಷೇತ್ರವಾದ ಅಮರನಾಥ ಗುಹೆಯ ಬಳಿ ಶುಕ್ರವಾರ ಸಂಜೆ ಮೇಘಸ್ಫೋಟ ಸಂಭವಿಸಿದ್ದು, ಹಲವು ಮಂದಿ ಸಾವನ್ನಪ್ಪಿದ್ದಾರೆ. ದ.ಕ.ಜಿಲ್ಲೆಯಿಂದಲೂ ಯಾತ್ರೆ ಕೈಗೊಂಡಿರುವ ಸಾಧ್ಯತೆ ಇದೆ. ಯಾತ್ರೆ ಕೈಗೊಂಡವರ ಮಾಹಿತಿಯನ್ನು ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಮೇಘಸ್ಫೋಟದಿಂದಾಗಿ ಯಾತ್ರೆಯ ಮಾರ್ಗದಲ್ಲಿ ಯಾತ್ರಾರ್ಥಿಗಳು ತಂಗಲು ನಿರ್ಮಿಸಿದ್ದ ಟೆಂಟ್ಗಳು ಪ್ರವಾಹದ ನೀರಿನ ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿವೆ. ಈ ಟೆಂಟ್ ಗಳಲ್ಲಿದ್ದ 16 ಯಾತ್ರಾರ್ಥಿಗಳು ಪ್ರವಾಹದ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಇನ್ನು ಮೇಘಸ್ಫೋಟದ ಅನಾಹುತ ಬಳಿಕ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಜಿಲ್ಲೆಯಿಂದ ಯಾರಾದರೂ ತೆರಳಿದ್ದವರ ವಿವರವಿದ್ದರೆ ಟೋಲ್ಫ್ರೀ ಸಂಖ್ಯೆಯ ಮೂಲತ ತಿಳಿಸುವಂತೆ ಮನವಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮನವಿ ಮಾಡಿದ್ದಾರೆ.