ಕಾಸರಗೋಡು, ಜು 09 (DaijiworldNews/HR): ವೀಸಾ ವಂಚನೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು 15 ವರ್ಷಗಳ ಬಳಿಕ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಕಡಬ ನಿವಾಸಿ ಅಬ್ದುಲ್ ಕರೀಂ(49) ಬಂಧಿತ ಆರೋಪಿ.
ಈತನನ್ನು ಕಡಬದ ಪತ್ನಿ ಮನೆಯಿಂದ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
2007ರಲ್ಲಿ ನೆಲ್ಲಿಕಟ್ಟೆಯ ಸತೀಶ್ ಎಂಬವರಿಗೆ ವೀಸಾ ನೀಡುವುದಾಗಿ ಹೇಳಿ 80 ಸಾವಿರ ರೂ ಪಡೆದು ವಂಚಿಸಿದ್ದನು. ಆದರೆ ಈತ ವೀಸಾ ನೀಡದೆ ತಲೆ ಮರೆಸಿಕೊಂಡಿದ್ದನು. ಸತೀಶ್ ಈ ಬಗ್ಗೆ ಅಂದು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಕೇಸು ದಾಖಲಿಸಿದ್ದರು.
ಇನ್ನು ಈತನನ್ನು ಹಲವು ಬಾರಿ ಪೊಲೀಸ್ ಠಾಣೆಗೆ ಹಾಜರಾಗಲು ನೋಟಿಸ್ ನೀಡಿದ್ದರೂ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2020 ರಲ್ಲಿ ಈತನನ್ನು ತಲೆ ಮರೆಸಿಕೊಂಡ ಆರೋಪಿ ಎಂದು ನ್ಯಾಯಾಲಯ ಘೋಷಿಸಿತ್ತು.