ಉಡುಪಿ, ಜು 09 (DaijiworldNews/MS): ಬ್ರಹ್ಮಾವರದ ಕುಮ್ರಗೊಡುವಿನ ಮಿಲನ್ ರೆಸಿಡೆನ್ಸಿಯಲ್ಲಿ 2021 ಜುಲೈ 12ರಂದು ನಡೆದಿದ್ದ ಕೊಲೆ ಪ್ರಕರಣದ ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಕೊಲೆಯಾದ ವಿಶಾಲ ಗಾಣಿಗ ಮತ್ತು ಆರೋಪಿ ಪತಿ ರಾಮಕೃಷ್ಣ ಗಾಣಿಗ
ಪ್ರಕರಣದ ಮತ್ತೋರ್ವ ಆರೋಪಿ ಸುಫಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು (21) ನನ್ನು ಉತ್ತರ ಪ್ರದೇಶದ ಗೋರಕ್ ಪುರದಿಂದ ಉಡುಪಿ ಪೋಲಿಸರು ಬಂಧಿಸಿದ್ದಾರೆ.
ರೋಹಿತ್ ಮೂಲತಃ ಮುಂಬೈ ಮೂಲದವನಾಗಿದ್ದು ಕೊಲೆ ನಡೆಸಿದ ಬಳಿಕ ನಾಪತ್ತೆಯಾಗಿದ್ದನು. ಈತನ ಪೋಷಕರು ಮುಂಬೈನ ಗ್ರಾಮ್ ದೇವಿ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಈ ಸುಪಾರಿ ಹಂತಕನನ್ನು ಸೆರೆ ಹಿಡಿಯಲು ಕಳೆದ ಒಂದು ವರ್ಷದಿಂದ ಬ್ರಹ್ಮಾವರ ವೃತ್ತದ ಕೋಟ, ಬ್ರಹ್ಮಾವರ, ಹಿರಿಯಡ್ಕ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿದ್ದರು
ಈತ ವಿಶಾಲ ಗಾಣಿಗ ಕೊಲೆಯ ನಂತರ ತನ್ನ ಸ್ವಂತ ಮನೆ ಮಹಾರಾಷ್ಟ್ರವನ್ನು ಬಿಟ್ಟು ನೇಪಾಳ ಗಡಿಯಲ್ಲಿನ ಮಹಾರಾಜ ಗಂಜ್ ಪರಿಸರದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಈ ಆರೋಪಿಯಿಂದ ಕೊಲೆಯ ಬಗ್ಗೆ ಹಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ಪಡೆಯುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
ವಿಶಾಲ ಗಾಣಿಗ ಅವರನ್ನು ಬ್ರಹ್ಮಾವರದ ಪ್ಲ್ಯಾಟ್ ನಲ್ಲಿ ಭೀಕರವಾಗಿ ಕೊಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಮಂಗಳ ಸೂತ್ರ ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಸುಲಿಗೆ ಮಾಡಲಾಗಿತ್ತು. ಈ ಕೊಲೆಯ ಸೂತ್ರದಾರನಾದ ರಾಮಕೃಷ್ಣ ಗಾಣಿಗ ವಿದೇಶದಲ್ಲಿದ್ದು ಕೊಂಡೆ ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದ. ವಿಶಾಲ ಗಾಣಿಗಳ ಗಂಡ ರಾಮಕೃಷ್ಣ ಗಾಣಿಗ ಹಾಗೂ ಉತ್ತರ ಪ್ರದೇಶದ ಗೋರಕ್ಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಈಗಾಗಲೇ ಪೋಲಿಸರು ಬಂಧಿಸಿ ಸುಲಿಗೆ ಮಾಡಿದ ಚಿನ್ನಾಭರಣವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿತರು ಕಳೆದ ಒಂದು ವರ್ಷದಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಇವರ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಈ ಪ್ರಕರಣದ ತನಿಖಾಧಿಕಾರಿಯಾದ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಅನಂತಪದ್ಮನಾಭರವರ ನೇತೃತ್ವದಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಗುರುನಾಥ ಹಾದಿಮನಿ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್ ರವರನ್ನು ಒಳಗೊಂಡ ವಿಶೇಷ ತಂಡವು ಸುಫಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಈತನನ್ನು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಬಂಧಿಸಿದ್ದರು
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಎನ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ .ಟಿ ಸಿದ್ದಲಿಂಗಪ್ಪರವರ ಮಾರ್ಗದರ್ಶನದಂತೆ, ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ ವೃತ್ತ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಗುರುನಾಥ ಹಾದಿಮನಿ, ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ, ಬ್ರಹ್ಮಾವರ ಠಾಣೆಯ ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್, ಕೋಟ ಠಾಣೆಯ ಸಿಬ್ಬಂದಿಯವರಾದ ರಾಘವೇಂದ್ರ, ವಿಜಯೇಂದ್ರ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಕೃಷ್ಣಪ್ಪ, ವಾಸುದೇವ ಪೂಜಾರಿ, ಪ್ರದೀಪ್ ನಾಯಕ್, ಕೃಷ್ಣ ಶೇರುಗಾರ್, ಶೇಖರ ಶೇರುಗಾರ್, ಜ್ಯೋತಿ ಎಂ, ನಾಗಶ್ರೀ ಹೆಚ್.ಪಿ. ರವರು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ.ಎನ್, ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿದ್ದಾರೆ.