ಮಂಗಳೂರು, ಜು 09 (DaijiworldNews/HR): ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ 12 ವಿದ್ಯಾರ್ಥಿಗಳನ್ನು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಾನೂಫ್ ಅಬ್ದುಲ್ ಗಫೂರ್(21), ಮುಹಮ್ಮದ್ ರಸೀನ್(22), ಗೋಕುಲ ಕೃಷ್ಣನ್(22), ಶಾರೂನ್ ಆನಂದ(19), ಅನಂತು ಕೆ.ಪಿ.(18), ಅಮಲ್(21), ಅಭಿಷೇಕ್(21), ನಿದಾಲ್(21), ಶಾಹೀದ್ ಎಂ.ಟಿ.ಪಿ.(22), ಫಹಾದ್ ಹಬೀಬ್(22), ಮುಹಮ್ಮದ್ ರಿಶಿನ್(22) ಹಾಗೂ ರಿಜಿನ್ ರಿಯಾಝ್(22) ಎಂದು ಗುರುತಿಸಲಾಗಿದ್ದು, ಈ ಎಲ್ಲಾ ವಿದ್ಯಾರ್ಥಿಗಳು ಕೇರಳ ನಿವಾಸಿಗಳಾಗಿದ್ದಾರೆ.
ವಿದ್ಯಾರ್ಥಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಬಿ ಮತ್ತು ಅವರ ತಂಡ ವೆಲೆನ್ಸಿಯಾದ ಸೂಟರ್ಪೇಟೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 900 ಗ್ರಾಂ ತೂಕದ 20,000 ರೂ. ಮೌಲ್ಯದ ಗಾಂಜಾ ಸಹಿತ ಒಟ್ಟು 2.85 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು ಕೆಲವು ಯುವಕರು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿರುವುದಾಗಿ ತಿಳಿದು ಬಂದಿದೆ.
ಎಲ್ಲಾ 12 ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 11 ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ.
ವಿದ್ಯಾರ್ಥಿಗಳು ನಗರದ ವಿವಿಧ ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು,ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.