ಬಂಟ್ವಾಳ, ಜು 08 (DaijiworldNews/HR): ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಅಪರಾಹ್ನದವರೆಗೆ ಉಂಟಾದ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ತ್ರಾಸಪಡುವಂತಾಯಿತು.
ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆ ಆರಂಭವಾದ ಸಂಚಾರಕ್ಕೆ ಅಡಚಣೆ 12 ಗಂಟೆಯವರೆಗೂ ಹೆದ್ದಾರಿಯಲ್ಲಿ ವಾಹನಗಳ ಸರತಿ ಸಾಲು ಕಂಡುಬಂದಿತ್ತು.
ಕಲ್ಲಡ್ಕ ಅಮ್ಟೂರು ಕ್ರಾಸ್ ನ ಬಳಿ ಹೆದ್ದಾರಿಯಲ್ಲಿ ಬೃಹತ್ ಹೊಂಡ ವೊಂದು ನಿರ್ಮಾಣ ವಾದ ಹಿನ್ನೆಲೆಯಲ್ಲಿ ಪ್ರಾರಂಭವಾದ ಬ್ಲಾಕ್ ನಿರಂತರವಾಗಿ ಮುಂದುವರಿದಿದ್ದು, ಕೆಲ ವಾಹನ ಸವಾರರು ಎರ್ರಾಬಿರ್ರಿ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಯಿತು.
ಬೆಳಿಗ್ಗೆ ಹೊತ್ತು ಕೆಲಸಕ್ಕೆ ಹೋಗುವವರ ಜೊತೆ ಅಂಬ್ಯುಲೆನ್ಸ್ ವಾಹನಗಳು ಕೂಡ ತಾಸು ಗಟ್ಟಲೆ ಕ್ಯೂ ನಲ್ಲಿ ನಿಂತು ಪರದಾಡಬೇಕಾಯಿತು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ. ಸಂಸ್ಥೆ ಕಾರ್ಮಿಕರ ಮುಖೇನ ಗುಂಡಿ ಮುಚ್ಚುವ ಕಾರ್ಯ ಮಾಡಿದೆ. ಆದರೆ ಕಾಮಗಾರಿ ಆರಂಭವಾದ ಬಳಿಕ ನಿರಂತರವಾಗಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆಯಾದರೂ ಈ ರೀತಿಯಲ್ಲಿ ತಾಸುಗಟ್ಟಲೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆಯಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
5 ನಿಮಿಷಗಳ ಕಾಲ ಹೆದ್ದಾರಿ ಬಂದ್ ಆದರೆ ಕಾನೂನು ಕ್ರಮ ಕೈಗೊಳ್ಳುವ ಪೋಲೀಸರು ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಅವ್ಯವಸ್ಥಿತ ಕಾಮಗಾರಿಯಿಂದ ಈ ತೊಂದರೆ ಆದರೂ ಅವರ ಬಗ್ಗೆ ಯಾಕೆ ಮೃದು ಧೋರಣೆ ಹೊಂದಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.