ಬೈಂದೂರು, ಜ 20(SM): ಬೈಂದೂರು ಠಾಣಾ ವ್ಯಾಪ್ತಿಯ ಕಿರಿಮಂಜೇಶ್ವರದ ನಾಗೂರು ಜಾಮಿಯಾ ಮಸೀದಿ ಆವರಣಕ್ಕೆ ಹಂದಿಯ ಕಿವಿ ಮತ್ತು ಕಾಲುಗಳನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ನವೀನ್ ಖಾರ್ವಿ, ರಾಘವೇಂದ್ರ ಖಾರ್ವಿ ,ಶ್ರೀಧರ್ ಖಾರ್ವಿ, ರವಿಚಂದ್ರ, ನಾಗರಾಜ್ ಬಂಧಿತ ಆರೋಪಿಗಳು.
ಆರೋಪಿಗಳ ವಿರುದ್ಧ ಜನವರಿ 14ರಂದು ಮಸೀದಿ ಆವರಣಕ್ಕೆ ಹಂದಿ ಮಾಂಸ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಜ. 15ರಂದು ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿತ್ತು.
ಕುಂದಾಪುರ ಉಪ ವಿಭಾಗದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿಯವರು ಹತ್ತು ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.