ವಿಟ್ಲ, ಜ 20(SM): ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಬಡ ಕುಟುಂಬವೊಂದಕ್ಕೆ ಸಿಡಿಲಾಘಾತ ತಟ್ಟಿದೆ. ಮೊದಲೇ ಬಡತನದ ಕಹಿಯುನ್ನುತ್ತಿದ್ದ ಕುಟುಂಬಕ್ಕೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಷ್ಟಪಟ್ಟಾದರೂ ಬದುಕು ಸಾಗಿಸುತ್ತಿದ್ದ ಕುಟುಂಬಕ್ಕೆ ಈ ಅವಘಡ ದೊಡ್ದ ಪೆಟ್ಟು ನೀಡಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಚ್ಚಿರಪದವು ಎಂಬಲ್ಲಿನ ನಾರಾಯಣ-ಚಂದ್ರಾವತಿಯವರ ಕುಟುಂಬದ ಕಣ್ಣೀರ ಕಥೆ. ತಾಯಿ ಮಲಗಿದ ಸ್ಥಿತಿಯಲ್ಲಿದ್ದರೆ, ಇತ್ತ ಅಮ್ಮನ ಅಸಹಾಯಕ ಸ್ಥಿತಿ ಕಂಡು ಇಬ್ಬರು ಪುಟ್ಟ ಮಕ್ಕಳು ಮರುಗುತ್ತಿದ್ದಾರೆ.
ಮನೆ ಯಜಮಾನ ಕೂಲಿ ಮಾಡಿಕೊಂಡು, ಮನೆಯೊಡತಿ ಬೀಡಿ ಕಟ್ಟಿಕೊಂಡು ಬಡತನವಿದ್ದರೂ ಗಂಟಲಲ್ಲೇ ನುಂಗಿಕೊಂಡು ಖುಷಿ ಖುಷಿಯಿಂದಲೇ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ, ಡಿಸೆಂಬರ್ ತಿಂಗಳ 27ನೇ ತಾರೀಕು ಆ ಕುಟುಂಬಕ್ಕೆ ಕರಾಳ ದಿನವಾಗಿತ್ತು.
ಪೆರುವಾಯಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಿನ್ನೆಲೆ ನಾರಾಯಣ ಹಾಗೂ ಅವರ ಕುಟುಂಬ ದೇವರ ದರ್ಶನ ಪಡೆಯಲು ತೆರಳಿತ್ತು. ದೇವರ ದರ್ಶನ ಪಡೆದು ದೇವಸ್ಥಾನದಿಂದ ಇಬ್ಬರು ಮಕ್ಕಳು ಪತಿ ನಾರಾಯಣ ಹಾಗೂ ಚಂದ್ರಾವತಿ ಅಲ್ಲಿಂದ ಹೊರಟಿದ್ದಾರೆ. ನಾಲ್ಕೂ ಹೆಜ್ಜೆ ಮುಂದಕ್ಕೆ ತೆರಳಿದ್ದೇ ತಡ ಯಮಸ್ವರೂಪಿಯಾಗಿ ಬಂದಂತಹ ಬೈಕ್ ಆ ಪುಟ್ಟ ಸಂಸಾರದ ನಾಲ್ಕೂ ಮಂದಿಗೆ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿಯಾಗಿ ಚಂದ್ರಾವತಿಯವರ ತಲೆಗೆ ಗಂಭೀರ ಏಟಾಗಿದ್ದು, ಈಗಾಗಲೇ ೨ ಬಾರಿ ಆಪರೇಷನ್ ನಡೆದಿದೆ. ನೆರೆಹೊರೆಯವರ ನೆರವಿನಿಂದ ಚಿಕಿತ್ಸೆ ಮಾಡಲಾಗಿದೆ. ಆದ್ರೆ ಅವರಿನ್ನೂ ಗುಣಮುಖರಾಗಿಲ್ಲ. ಹಾಸಿಗೆಯಲ್ಲೇ ಮಲಗಿದ ಸ್ಥಿತಿಯಲ್ಲಿದ್ದಾರೆ. ಇವರು ಸಂಪೂರ್ಣ ಗುಣಮುಖರಾಗಲು ಲಕ್ಷಾಂತರ ರೂಪಾಯಿ ಅಗತ್ಯವಿದೆ.
ಇನ್ನು ಅವಘಡದಲ್ಲಿ ಇತ್ತ ಮಕ್ಕಳು, ಪತಿಗೂ ಏಟಾಗಿದ್ದು ಚಿಕಿತ್ಸೆ ಪಡೆದು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ಮೊದಲೇ ಕೂಲಿ ಮಾಡಿ ಬದುಕುತ್ತಿದ್ದ ಕುಟುಂಬ ಇದೀಗ ಈ ದೊದ್ದ ಅವಘಡದಿಂದಾಗಿ ದಿಕ್ಕೇ ತೋಚದಂತಾದ ಪರಿಸ್ಥಿತಿಯಲ್ಲಿದೆ. ನಾರಾಯಣ ಅವರ ಮನೆಯ ಈ ಪರಿಸ್ಥಿತಿ ಹಾಗೂ ತನಗಾದ ಏಟಿನಿಂದಾಗಿ ಕೆಲಸಕ್ಕೂ ಹೋಗದ ಪರಿಸ್ಥಿತಿಯಲ್ಲಿದ್ದಾರೆ.
ನೆರೆಹೊರೆಯವರು ಬಂದು ಹೋಗಿ ಸಹಾಯ, ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಆದರೆ ಚಂದ್ರಾವತಿಯವರ ತಲೆಗೆ ಗಂಭೀರ ಏಟಾಗಿರುವುದರಿಂದ ಅವರು ಮೊದಲಿನಂತಾಗಲೂ ಲಕ್ಷಾಂತರ ರೂಪಾಯಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಹೃದಯ ದಾನಿಗಳು ಇವರಿಗೆ ಸಹಾಯಹಸ್ತ ನೀಡಿದ್ದಲ್ಲಿ ಈ ಕುಟುಂಬ ಮತ್ತೆ ಮೊದಲಿನಂತೆ ಬದುಕು ಸಾಗಿಸಲು ಸಾಧ್ಯವಿದೆ.
ಇವರಿಗೆ ಆರ್ಥಿಕ ಸಹಾಯ ನೀಡಲು ಬಯಸುವವರು
MAST YASHAVANTHA
MOTHER CHANDRAVATHI
KARNATAKA BANK MANILA BRANCHA
MURVA POST
BANTWALA TALUK
A.C 5022500100482601
mob: 9902636584
ಸಹೃದಯ ದಾನಿಗಳ ನಿರೀಕ್ಷೆಯಲ್ಲಿದೆ ಬಡಕುಟುಂಬ