ಬೆಳ್ತಂಗಡಿ, ಜ 20(SM): ಖಾಸಗಿ ವಿದ್ಯುತ್ ಘಟಕದವರ ನಿರ್ಲಕ್ಷ್ಯದಿಂದಾಗಿ ಓರ್ವ ಕಾರ್ಮಿಕ ಮೃತಪಟ್ಟು ಇನ್ನೋರ್ವ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ನಡ ಎಂಬಲ್ಲಿ ನಡೆದಿದೆ.
ತಾಲೂಕಿನ ನಡದಲ್ಲಿ ಖಾಸಗಿ ವಿದ್ಯುತ್ ಘಟಕದ ಕೇಬಲ್ ಅಳವಡಿಕೆ ಕಾಮಗಾರಿಯ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕುಣಿಗಲ್ ಮೂಲದ ಓರ್ವ ಕಾರ್ಮಿಕ ಕಾಂತರಾಜು(24) ಮೃತಪಟ್ಟಿದ್ದಾರೆ. ಮತ್ತೋರ್ವ ಕಾರ್ಮಿಕ ಶೇಷಾದ್ರಿ ಕುಮಾರ್(25) ಗಂಭೀರ ಗಾಯಗೊಂಡಿದ್ದಾರೆ.
ನೆರಿಯದ ಖಾಸಗಿ ವಿದ್ಯುತ್ ಘಟಕದಿಂದ ಗುರುವಾಯನಕೆರೆಗೆ ವಿದ್ಯುತ್ ಸಂಪರ್ಕಿಸುವುದಕ್ಕಾಗಿ ಕೇಬಲ್ ಹಾಕುವ ಕಾಮಗಾರಿ ನಡೆಯುತ್ತಿದೆ. ನಡ ಸರಕಾರಿ ಪ್ರೌಢ ಶಾಲೆಯ ಹಿಂಬದಿ ಕಾಮಗಾರಿ ನಡೆಯುತ್ತಿದ್ದ ವೇಳೆ ಘಟನೆ ನಡೆದಿದ್ದು, ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಕಂಬವನ್ನು ಕ್ರೇನ್ ಮೂಲಕ ಎತ್ತಿದಾಗ ಅದು ವಿದ್ಯುತ್ ತಂತಿಗೆ ಸ್ಪರ್ಶಿಸಿ, ಕಾರ್ಮಿಕರಿಗೆ ವಿದ್ಯುತ್ ಶಾಕ್ ಹೊಡೆದಿದೆ.
ಗಾಯಗೊಂಡ ಕಾರ್ಮಿಕನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.