ಸುಳ್ಯ,ಜ 20(MSP): ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಾಗಲಿ, ಸ್ಪರ್ಧಿಸುವುದಾಗಲಿ ಇಲ್ಲ ಎಂದು ಜಯಕರ್ನಾಟಕ ಸಂಸ್ಥಾಪಕ, ಕರ್ನಾಟಕ ಅಥ್ಲೆಟಿಕ್ಸ್ ಎಸೋಸಿಯೇಶನ್ ಅಧ್ಯಕ್ಷ ಎನ್.ಮುತ್ತಪ್ಪ ರೈ ಹೇಳಿದರು.
ಸುಳ್ಯದ ಕಾವೇರಿ ರೆಸಿಡೆನ್ಸಿಯಲ್ಲಿ ಶನಿವಾರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
11 ವರ್ಷಗಳ ಹಿಂದೆ ಸ್ಥಾಪನೆಗೊಂಡ ಜಯಕರ್ನಾಟಕ ಇಂದು 40 ಲಕ್ಷ ಸದಸ್ಯರನ್ನು ಹೊಂದಿದೆ. ಈ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ. ಸಂಘಟನೆಯನ್ನು ಇನ್ನೂ ಜನರಿಗಾಗಿ ಬಲ ಪಡಿಸಲಾಗುತ್ತದೆ. ಸರ್ಕಾರದ ವಿರುದ್ಧ ಅಲ್ಲ. ಜನರಿಗೆ ಸರ್ಕಾರದಿಂದ ಸಿಗಬೇಕಾದ ಕಾನೂನು ಬದ್ಧ ಸೌಲಭ್ಯ ಒದಗಿಸಲು ಸಂಘಟನೆ ಇದೆ’ ಎಂದು ವಿವರಿಸಿದರು.
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೊಡುಗೆ ನೀಡಿದ ಬ್ರಹ್ಮರಥದ ಕೆಲಸ ಸಾಗುತ್ತಿದೆ. ಮುಂದಿನ ಏಪ್ರಿಲ್ನಲ್ಲಿ ಸಮರ್ಪಣೆ ಆಗಲಿದೆ ಎಂದು ಮುತ್ತಪ್ಪ ರೈ ಹೇಳಿದರು.ಜಯಕರ್ನಾಟಕದ ರಾಜ್ಯ ಸಮಿತಿ ಅಧ್ಯಕ್ಷ ಚಂದ್ರಪ್ಪ, ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್, ದಿನೇಶ್ ಅಡ್ಕಾರ್, ಸಂತೋಷ್ ಮಡ್ತಿಲ ಇದ್ದರು.