ಮಂಗಳೂರು, ಜು 07 (DaijiworldNews/HR): ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ ಎಸ್ ಯಡಪಡಿತ್ತಾಯ ಅವರ ಹೆಸರಿನಲ್ಲಿ ನಕಲಿ ವಾಟ್ಸಾಪ್ ಪ್ರೊಫೈಲ್ ಸೃಷ್ಟಿಸಿ, ವಂಚಿಸಲು ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕುಲಪತಿ ಯಡಪಡಿತ್ತಾಯ ಅವರ ಫೋಟೊ ಇರುವ ವಾಟ್ಸಾಪ್ ಪ್ರೊಫೈಲ್ ಸೃಷ್ಟಿಸಿ ಅದರಿಂದ ಸಂಪರ್ಕದಲ್ಲಿರುವ ಎಲ್ಲ ಕಾಲೇಜು ಪ್ರಾಂಶುಪಾಲರು, ಸಹದ್ಯೋಗಿಗಳು ಹಾಗೂ ಇತರರಿಗೆ ಸಂದೇಶಗಳನ್ನು ಕಳುಹಿಸಿ ಗಿಫ್ಟ್ ಕಾರ್ಡ್ ಖರೀದಿಸುವಂತೆ ಸಂದೇಶ ಕಳುಹಿಸಲಾಗಿದ್ದು, ಇದರಿಂದ ಅನುಮಾನಗೊಂಡ ಒಬ್ಬರು ಯಡಪಡಿತ್ತಾಯ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಕುಲಪತಿಗಳು ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನು ವಂಚಕರು ವಿಶ್ವವಿದ್ಯಾನಿಲಯದ ವೆಬ್ ಸೈಟ್ ನಿಂದ ಮೊಬೈಲ್ ನಂಬರ್ ಅನ್ನು ಪಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ..
ಈ ರೀತಿ ಹಲವರ ಪೋಟೋಗಳನ್ನು ಬಳಸಿಕೊಂಡು ವಂಚನೆ ಮಾಡುತ್ತಾ ಬಂದಿರುವ ಘಟನೆಗಳು ನಡೆಯುತ್ತಿದ್ದು, ನಾನು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದೇನೆ ಎಂದು ಯಡಪಡಿತ್ತಾಯ ತಿಳಿಸಿದ್ದಾರೆ.