ಉಡುಪಿ, ಜು 06 (DaijiworldNews/DB): ಪ್ರಾಕೃತಿಕ ವಿಪತ್ತುಗಳನ್ನು ನಿಯಂತ್ರಿಸಲು ಸರ್ಕಾರ ಶಾಶ್ವತ ಮತ್ತು ತಾತ್ಕಾಲಿಕ ಪರಿಹಾರಗಳನ್ನು ಕೈಗೊಳ್ಳುತ್ತಿದೆ. ಬೈಂದೂರು, ಕುಂದಾಪುರ, ಕಾಪು ಮುಂತಾದೆಡೆ ಕಡಲ್ಕೊರೆತ ಹೆಚ್ಚುತ್ತಿದ್ದು, ಇದರ ಬಗ್ಗೆ ವಿಸ್ತ್ರತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
ಪ್ರಾಕೃತಿಕ ವಿಪತ್ತುಗಳ ಕುರಿತು ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕ್ರಮಕ್ಕಾಗಿ ಈಗಾಗಲೇ ಸರ್ಕಾರವನ್ನು ಆಗ್ರಹಿಸಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದೇನೆ. ಕ್ಷಿಪ್ರ ಕ್ರಮಕ್ಕಾಗಿ ವರದಿ ಸಲ್ಲಿಸಲು ಸಿಎಂ ತಿಳಿಸಿದ್ದಾರೆ. ಕಾರವಾರ, ಭಟ್ಕಳ ಮತ್ತು ಕುಮಟಾದ ಕೆಲವು ಭಾಗಗಳಿಗೆ ನಾನು ಭೇಟಿ ನೀಡಿದ್ದೇನೆ. ಅಲ್ಲಿಯೂ ಕಡಲ್ಕೊರೆತ ಸಮಸ್ಯೆ ಇದೆ. ಪ್ರಾಕೃತಿಕ ವಿಪತ್ತುಗಳಿಗೆ ಪರಿಹಾರ ಕಾರ್ಯಗಳ ಸಂಬಂಧ ವರದಿ ತಯಾರಿಸುವಂತೆ ಉಡುಪಿ, ಕಾರವಾರ, ಮಂಗಳೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕಡಲ್ಕೊರೆತದ ಶಾಶ್ವತ ತಡೆಗೆ ಸಿಎಂ ಕೂಡಾ ಕೆಲವು ಅಂಶಗಳನ್ನು ಹಂಚಿಕೊಂಡಿದ್ದಾರೆ. ಕಾಸರಗೋಡಿನಲ್ಲಿ ಯು.ಕೆ.-ಯೂಸುಫ್ ಅವರು ಮೊದಲ ಬಾರಿಗೆ ಸಮುದ್ರ ಅಲೆ ಬ್ರೇಕರ್ಗಳನ್ನು ಅಳವಡಿಸಿದ್ದಾರೆ. ಅವರನ್ನು ಉಳ್ಳಾಲದ ಬಟ್ಟಂಪಾಡಿಗೆ ಕರೆದುಕೊಂಡು ಹೋಗಿದ್ದೆ. ಈ ಯೋಜನೆಗೆ 25 ಕೋಟಿ ರೂ. ವೆಚ್ಚವಾಗಲಿದೆ. ತಜ್ಞರ ಅಭಿಪ್ರಾಯ ಪಡೆಯುವಂತೆ ಮುಖ್ಯಮಂತ್ರಿಯವರು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಮರವಂತೆಯಲ್ಲಿ ಡಕ್ ಫೂಟ್ ಯೋಜನೆ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಈಗಾಗಲೇ ತಂಡವೊಂದು ಪರಿಶೀಲಿಸಿದೆ. ಶಾಶ್ವತ ಯೋಜನೆಗಳಿಗೆ ಅನುದಾನ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಅಂಗಾರ ವಿವರಿಸಿದರು.
ಶಾಸಕರಾದ ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಉಪಸ್ಥಿತರಿದ್ದರು.