ಕೋಟ, ಜು 06 (DaijiworldNews/DB): ಪ್ರತಿವರ್ಷ ಮಳೆಗಾಲದಲ್ಲಿ ಕೋಟ ಗ್ರಾಮ ಪಂಚಾಯತ್, ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೃಷಿ ಭೂಮಿಗೆ ಕಂಟಕವಾಗಿ ಪರಿಣಮಿಸಿದ ಅಂತರಂಗೆ ಸಮಸ್ಯೆ ಹಾಗೂ ಹೊಳೆಗಳ ಹೂಳೆತ್ತಿ ಕೃತಕ ನೆರೆ ಸಮಸ್ಯೆಗೆ ಮುಕ್ತಿಗಾಣಿಸಬೇಕೆಂದು ಒತ್ತಾಯಿಸಿ ಕೃಷಿಕರು, ಸಮಾನ ಮನಸ್ಕರು ಬುಧವಾರ ಕೋಟ ಮೂರಕೈ ಬಳಿ ಬನ್ನಾಡಿ ತೆರಳುವ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಹೋರಾಟ ಸಮಿತಿಯ ಪರವಾಗಿ ಶ್ಯಾಮಸುಂದರ್ ನಾಯರಿ ಮಾತನಾಡಿ, ಅಂತರಂಗೆ ಹೊಳೆಗಳಲ್ಲಿ ವ್ಯಾಪಕವಾಗಿ ತುಂಬಿಕೊಂಡಿದೆ. ಅಲ್ಲದೆ, ಹೊಳೆಗಳಲ್ಲಿ ಹೂಳು ತುಂಬಿಕೊಂಡು ಸಾಕಷ್ಟು ಮನೆಗಳು ಜಲಾವೃತವಾಗಿವೆ. ಭತ್ತದ ಕೃಷಿ ನೆಲಸಮಗೊಳ್ಳುತ್ತಿದೆ. ಹೊಳೆ ಹೂಳೆತ್ತುವುದು, ಅಂತರಂಗೆ ಇನ್ನಿತರ ಗಿಡಗಂಟಿಗಳನ್ನು ತೆರೆವುಗೊಳಿಸಬೇಕು. ಅಲ್ಲದೆ, ಕೊಯ್ಕೂರು, ಗಿಳಿಯಾರು , ಬನ್ನಾಡಿ ಸೇತುವೆಯನ್ನು ಅಗಲಿಕರಣ ಮತ್ತು ಎತ್ತರಗೊಳಿಸಬೇಕು. ನಮ್ಮ ಹಲವು ವರ್ಷಗಳ ಬೇಡಿಕೆಗೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ನಿರ್ಲಕ್ಷ ತೋರಿದೆ. ಆಶ್ವಾಸನೆ ಬೇಡ, ನಮಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಸ್ಥಳಕ್ಕಾಗಮಿಸಿದ ಕುಂದಾಪುರ ಎ.ಸಿ ರಾಜು, ಸಮಸ್ಯೆಗಳ ಕುರಿತು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯಲ್ಲಿ ಮಾತುಕತೆ ನಡೆಸಿದ್ದೇನೆ. ಶೀಘ್ರ ಪರಿಹರಿಸುವ ಜೊತೆಗೆ ಮುಂದಿನ ಮೂರು ದಿನಗಳೊಳಗಾಗಿ ಅಂತರಗಂಗೆ ಹಾಗೂ ಗಿಡಗಂಟಿಗಳನ್ನು ತೆರೆವುಗೊಳಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಮಾಡುವುದಾಗಿ ತಿಳಿಸಿದರು. ಪಿಡಬ್ಲುಡಿ ಇಂಜಿನಿಯರ್ ಮಂಜುನಾಥ್ ಇದ್ದರು.
ಬಹುವರ್ಷಗಳ ಈ ಸಮಸ್ಯೆಗೆ ಶೀಘ್ರದಲ್ಲಿ ಮುಕ್ತಿ ದೊರಕದಿದ್ದರೆ ಮುಂದಿನ ದಿನಗಳಲ್ಲಿ 2 ಸಾವಿರಕ್ಕೂ ಅಧಿಕ ಕೃಷಿಕರನ್ನು ಸೇರಿಸಿ ಹೆದ್ದಾರಿ ಬಂದ್ ಚಳುವಳಿ ನಡೆಸುವ ಎಚ್ಚರಿಕೆಯನ್ನು ಹೋರಾಟಗಾರರು ಈ ವೇಳೆ ನೀಡಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಸದಸ್ಯರಾದ ರತ್ನ ನಾಗರಾಜ್ ಗಾಣಿಗ, ಸುಕನ್ಯಾ ಶೆಟ್ಟಿ, ಕೃಷಿಕರಾದ ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಗಾಣಿಗ,ರಾಧಾಕೃಷ್ಣ ಬ್ರಹ್ಮಾವರ, ಬೇಳೋರು ರಾಘವ ಶೆಟ್ಟಿ, ಜಯ ಕರ್ನಾಟಕದ ಸತೀಶ್ ಪೂಜಾರಿ, ಭೋಜ ಪೂಜಾರಿ, ಶ್ಯಾಮಸುಂದರ ನಾಯರಿ, ಕೋ.ಗಿ.ನಾ, ಟಿ.ಮಂಜುನಾಥ ಗಿಳಿಯಾರು, ಭರತ್ ಕುಮಾರ್ ಶೆಟ್ಟಿ, ರಾಜಾರಾಮ ಶೆಟ್ಟಿ, ಅಚ್ಯುತ್ ಪೂಜಾರಿ, ಸುಭಾಷ್ ಶೆಟ್ಟಿ,ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ, ಉಮೇಶ್ ನಾಯರಿ ಮತ್ತಿತರರು ಉಪಸ್ಥಿತರಿದ್ದರು.