ಕಡಬ, ಜ 20(MSP): ಕುಟ್ರಾಪ್ಪಾಡಿ ಗ್ರಾಮದಲ್ಲಿ ಮತ್ತೆ 3 ಮಂಗಗಳ ಶವಗಳು ಪತ್ತೆಯಾಗಿವೆ. ಹೀಗಾಗಿ ಕಡಬ ತಾಲೂಕಿನಲ್ಲಿ ಒಟ್ಟು 5 ಶವಗಳು ಪತ್ತೆಯಾಗುವುದರೊಂದಿಗೆ ಜನರಲ್ಲಿ ಮಂಗನಕಾಯಿಲೆಯ ಭೀತಿ ಮನೆಮಾಡಿದೆ.
ರಾಮಕುಂಜ ಗ್ರಾ.ಪಂ. ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ಆದಂ ಅವರಿಗೆ ಸೇರಿದ ತೋಟದಲ್ಲಿ ಜ. 16ರಂದು 1 ಮಂಗನ ಶವ ಪತ್ತೆಯಾಗಿತ್ತು. ಅದಕ್ಕೂ ಮೊದಲು ಕುಟ್ರಾಪ್ಪಾಡಿ ಗ್ರಾಮದ ಉಳಿಪ್ಪು ಅರಣ್ಯ ಪ್ರದೇಶದಲ್ಲಿ ಸಂಪೂರ್ಣ ಕೊಳೆತುಹೋಗಿದ್ದ ಶವ ಪತ್ತೆಯಾಗಿತ್ತು. ಆದ್ದರಿಂದ ಶವದ ಭಾಗಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ವಾರದ ಹಿಂದೆ ಕುಟ್ರಾಪ್ಪಾಡಿ ಗ್ರಾಮದ ಕುಂಟೋಡಿ ಜಯಚಂದ್ರ ರೈ ಅವರಿಗೆ ಸೇರಿದ ತೋಟದಲ್ಲಿ ಪತ್ತೆಯಾಗಿದ್ದ ಮಂಗನ ಶವವನ್ನು ಸ್ಥಳೀಯರು ಮಣ್ಣಿನಲ್ಲಿ ಹೂತು ಬಳಿಕ ಕಡಬ ಸರಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿಯ ಕ್ಯಾಸನೂರು ಕಾಡಿನ ಕಾಯಿಲೆ (ಕೆಎಫ್ಡಿ) ಘಟಕದ ವೈದ್ಯಾಧಿಕಾರಿಗಳು ಪರಿಸರದಲ್ಲಿ ಕಂಡುಬಂದ ಉಣುಗುಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕುಟ್ರಾಪ್ಪಾಡಿ ಗ್ರಾಮದ ಉರುಂಬಿಯ ಶೇಖರ ಗೌಡ ಅವರ ತೋಟದಲ್ಲಿ ಮತ್ತು ಮೀನಾಡಿಯಲ್ಲಿ ಹಲವು ದಿನಗಳ ಹಿಂದೆ ಮಂಗ ಸತ್ತಿರುವ ವಿಚಾರ ಶನಿವಾರ ಬೆಳಕಿಗೆ ಬಂದಿದೆ.