ಉಡುಪಿ, ಜು 06 (DaijiworldNews/DB): ನಿಗದಿಪಡಿಸಿದ ಕಾಲಮಿತಿ ಯೊಳಗೆ ರಾಷ್ಟ್ರೀಯ ಹೆದ್ದಾರಿಯ ತೇಪೆ ಕಾಮಗಾರಿ ಮುಗಿಸದಿದ್ದಲ್ಲಿ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ನವಯುಗ ಕಂಪನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕುಂದಾಪುರ – ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆಯನ್ನು ನವಯುಗ ಕಂಪನಿ ವಹಿಸಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಹೊಂಡ ಗುಂಡಿಯಿಂದ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ನವಯುಗ ಕಂಪನಿ ಟೋಲ್ ಸಂಗ್ರಹ ಮಾಡಿದ ಹಣದಲ್ಲಿ ರಸ್ತೆಯನ್ನು ಕೂಡಾ ನಿರ್ವಹಣೆ ಮಾಡಬೇಕು. ಕಾಲಮಿತಿ ನಿಗದಿ ಮಾಡುತ್ತೇವೆ. ಅಷ್ಟರೊಳಗೆ ಸರಿಪಡಿಸದಿದ್ದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ಕೊಡುವುದಿಲ್ಲ ಎಂದವರು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಗೈರಾಗುತ್ತಿರುವುದು ಸಹ್ಯವಲ್ಲ. ಯಾವುದೇ ಅಧಿಕಾರಿ ಇರಲಿ ಸಭೆಗೆ ಬಾರದೇ ಇದ್ದಲ್ಲಿ ಹೇಗೆ ಬರಿಸಬೇಕು ಎಂಬುದು ನಮಗೆ ಗೊತ್ತು. ಇದರಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕಾರಿಗಳ ಗೈರಿನ ಕುರಿತು ವರದಿ ಮಾಡುತ್ತೇವೆ. ಸಚಿವರಿಗೂ ಮಾಹಿತಿ ನೀಡುತ್ತೇವೆ. ಸ್ವಲ್ಪ ಕಾದು ನೋಡಿ ಏನು ಕ್ರಮ ಅಂತ ನಿಮಗೆ ಗೊತ್ತಾಗುತ್ತದೆ ಎಂದು ಉಡುಪಿ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಗೈರಾದ ಅಧಿಕಾರಿಗಳ ಮೇಲೆ ಗರಂ ಆದರು.