ಕಾಸರಗೋಡು, ಜು 06 (DaijiworldNews/DB): ಜಿಲ್ಲೆಯಲ್ಲಿ ಬುಧವಾರವೂ ಭಾರೀ ಮಳೆ ಸುರಿದ್ದಿದ್ದು, ಮಂಜೇಶ್ವರದ ಹೊಸಂಗಡಿಯಲ್ಲಿ 20 ಮನೆಗಳಿಗೆ ನೆರೆ ನೀರು ನುಗ್ಗಿದೆ . ವರ್ಕಾಡಿಯಲ್ಲಿ ಕಾರ್ಮಿಕರೋರ್ವರು ತೋಟದ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ವರ್ಕಾಡಿಯ ಮೌರಿಸ್ ಡಿಸೋಜ ( ೫೨) ಮೃತಪಟ್ಟವರು. ಬುಧವಾರ ಸಂಜೆ ತೋಟದ ಕೆರೆಗೆ ಬಿದ್ದಿದ್ದು, ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು.
ಮಂಜೇಶ್ವರ ಹೊಸಂಗಡಿಯಲ್ಲಿ 20 ಮನೆಗಳಿಗೆ ನೆರೆ ನೀರು ನುಗ್ಗಿದ್ದು, ನಾಗರಿಕರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ನೂರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಭಾರೀ ಮಳೆ ಮುಂದುವರಿಯುರುವುದರಿಂದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.
ಮಧೂರು ಮಧನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನ, ಮೀ೦ಜ ಬಳ್ಳ೦ಕೂಡ್ಲು ಪಾಡಂಗರ ಭಗವತಿ ಕ್ಷೇತ್ರ ಮೊದಲಾದೆಡೆಗಳಲ್ಲಿ ನೀರು ನುಗ್ಗಿದೆ. ಉಪ್ಪಳ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ಮೀಂಜ ಪಂಚಾಯತ್ ವ್ಯಾಪ್ತಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಎಕರೆಗಟ್ಟಲೆ ಕೃಷಿ ಹಾನಿ ಉಂಟಾಗಿದೆ. ಕೊಡಂಗೆ , ಮಜಿಬೈಲ್ನಲ್ಲಿ ಹಲವು ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಕೃಷಿ ಹಾನಿ ಉಂಟಾಗಿದೆ.