ಮಂಗಳೂರು, ಜು 06 (DaijiworldNews/DB): ನಗರದ ಪೊಲೀಸ್ ಮೈದಾನದಲ್ಲಿಂದು ರೌಡಿ ಶೀಟರ್, ಗಾಂಜಾ ಪೆಡ್ಲರ್ಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಯ ಹಿನ್ನೆಲೆ ಹೊಂದಿದವರ ಪೆರೇಡ್ ನಡೆಸಲಾಯಿತು. ಬಳಿಕ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ತಪಾಸಣೆ ನಡೆಸಿದರು.
ಆರೋಪಿಗಳ ಹಿನ್ನೆಲೆ, ಅಪರಾಧ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿದರಲ್ಲದೆ, ಅವರಲ್ಲಿದ್ದ ಮೊಬೈಲ್ ಫೋನ್ ಮತ್ತು ವ್ಯಾಲೆಟ್ಗಳನ್ನು ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ಸ್, ಕಳ್ಳತನ, ದರೋಡೆ ಸೇರಿದಂತೆ 2000ಕ್ಕೂ ಹೆಚ್ಚು ಮಂದಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರಿದ್ದಾರೆ. ಈ ಪೈಕಿ ಉತ್ತಮ ನಡವಳಿಕೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೂರ ಉಳಿದ ಕಾರಣದಿಂದಾಗಿ ಕಳೆದ ಮೂರು ತಿಂಗಳ ಹಿಂದೆ 750 ಮಂದಿಯನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದರು.
17 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ 400 ಮಂದಿಯನ್ನು ಇಂದು ಪರೇಡ್ಗಾಗಿ ಕರೆಯಲಾಗಿತ್ತು. ಇವರೆಲ್ಲ ಈಗಲೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರಾ ಎಂಬುದನ್ನು ತಿಳಿದುಕೊಳ್ಳಲು ಅವರಲ್ಲಿರುವ ದಾಖಲೆ, ಮೊಬೈಲ್ ಫೋನ್ಗಳನ್ನು ಈ ವೇಳೆ ಪರಿಶೀಲಿಸಲಾಗಿದೆ. ಕೆಲವರಲ್ಲಿ ದುಬಾರಿ ಬೆಲೆಯ ಮೊಬೈಲ್ ಫೋನ್, ಚಿನ್ನಾಭರಣಗಳು ಇರುವುದು ಗೊತ್ತಾಗಿದ್ದು, ಅವರ ಆದಾಯದ ಮೂಲ ಪತ್ತೆ ಹಚ್ಚಲಾಗುವುದು ಎಂದು ಇದೇ ವೇಳೆ ಆಯುಕ್ತರು ತಿಳಿಸಿದರು.