ನೆಲ್ಯಾಡಿ, ಜ 20(MSP): ಹತ್ಯಡ್ಕ ಗ್ರಾಮದ ಅರಸಿನ ಮಕ್ಕಿಯಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸರಾಫನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳೀಯ ನಿವಾಸಿ ಮನ್ಮಥ ಆಚಾರಿ(45) ಬ್ಯಾಂಕ್ ಗೆ ಸುಮಾರು 57೭ ಮಂದಿಯ ಮೂಲಕ ನಕಲಿ ಚಿನ್ನವನ್ನು ಅಸಲಿ ಎಂದು ನಂಬಿಸಿ ಅಡವಿರಿಸಿ 38,71,240 ರೂ. ವಂಚಿಸಿದ ಪ್ರಕರಣ ದಾಖಲಾಗಿದೆ. ಬ್ಯಾಂಕಿನ ಮ್ಯಾನೇಜರ್ ರವೀಂದ್ರ ಪೈ ನೀಡಿ ರುವ ಮಾಹಿತಿಯಂತೆ ರಮೇಶ್ ತುಂಗ ಅವರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣದ ವಿವರ: ಅರಸಿನಮಕ್ಕಿ ಗ್ರಾಮೀಣ ಬ್ಯಾಂಕ್ ನಲ್ಲಿ ಸರಾಫನಾಗಿದ್ದ ಮನ್ಮಥ ಆಚಾರಿ, ಬ್ಯಾಂಕ್ ಗೆ ಬರುವ ತನ್ನ ಪರಿಚಯದವರ ಮೂಲಕ ನಕಲಿ ಚಿನ್ನವನ್ನು ಬ್ಯಾಂಕಿಗೆ ಅಡವಿರಿಸಲು ಕಳುಹಿಸುತ್ತಿದ್ದ. ಬ್ಯಾಂಕ್ ಗೆ ಗ್ರಾಹಕರು ಬಂದ ಸಂದರ್ಭ ಈ ಚಿನ್ನದ ಆಭರಣಗಳ ದೃಢತೆಯನ್ನು ಪರಿಶೀಲಿಸುರ್ರಿದ್ದ ಜವಬ್ದಾರಿಯುಳ್ಳ ಈತ ಈ ನಕಲಿ ಚಿನ್ನವನ್ನು ಅಸಲಿಯೆಂದು ದೃಢೀಕರಿಸುತ್ತಿದ್ದ. ಹಲವು ವರ್ಷಗಳಿಂದ ಅಡವಿಟ್ಟ ಗ್ರಾಹಕರು ಚಿನ್ನ ಬಿಡಿಸಲು ಮುಂದಾಗದೇ ಏಲಂ ಗೆ ಬ್ಯಾಂಕ್ ಅಧಿಕಾರಿಗಳು ಮುಂದಾದಾಗ ಅಡವಿರಿಸಿದ ಚಿನ್ನ ನಕಲಿ ಎಂದು ಗಮನಕ್ಕೆ ಬಂದಿದೆ. ಇದೇ ಸಂಶಯದ ಮೇರೆಗೆ ಇತರ ಚಿನ್ನಗಳನ್ನು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಸುಮಾರು 57 ಗ್ರಾಹಕರು ಇವನ ಮೋಸದಾಟ ಅರಿಯದೇ ತಮ್ಮ ಹೆಸರಿನಲ್ಲಿ ನಕಲಿ ಚಿನ್ನ ಅಡವಿರಿಸಿ ದುಡ್ಡು ಕೊಟ್ಟು , ನಯವಂಚಕನ ಜತೆಗೆ ತಾವೂ ಬ್ಯಾಂಕ್ ನ್ನು ವಂಚಿಸಿದ ಕೇಸನ್ನು ಮೈಮೇಲೆ ಎಳೆದುಕೊಂಡಂತಾಗಿದೆ.
ಸರಾಫನ ಕಾರಣದಿಂದ ಮೋಸ ಹೋದ ಗ್ರಾಹಕರು ಪ್ರಕರಣವನ್ನು ಕೂಡಲೇ ಇತ್ಯರ್ಥಪಡಿಸುವಂತೆ ಬ್ಯಾಂಕಿನ ಮ್ಯಾನೇಜರ್ ಹಾಗೂ ಪೊಲೀಸ್ ಅಧಿಕಾರಿಗಳಲ್ಲಿ ಆಗ್ರಹಿಸುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.