ಕುಂದಾಪುರ,ಜ 20(MSP): ಎರಡೂವರೆ ವರ್ಷಗಳ ಹಿಂದೆ ಮನೆ ಕೆಲಸದಾಕೆಯೊಡನೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು ಆಕೆ ಇನ್ನೊಂದು ಮದುವೆಯಾದ್ದರಿಂದ ಜಿಗುಪ್ಸೆಗೊಂಡು ಮನೆಮಂದಿಗೆ ವಿಷವುಣಿಸಿ ತಾನೂ ವಿಷವುಂಡು ಇಬ್ಬರು ಮಕ್ಕಳ ಸಾವು, ಪತ್ನಿಯ ಕೊಲೆಯತ್ನ ನಡೆಸಿರುವುದು ಸಾಬೀತಾಗಿದ್ದು, ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಮಕ್ಕಳ ಸಾವಿಗೆ ಕಾರಣನಾದ ಪಾಪಿ ಅಪ್ಪನಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ ಖಂಡೇರಿ ಪಾಸಿ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.
ಆ ಮೂಲಕ ಕುಂದಾಪುರದ ನ್ಯಾಯಾಲಯದ ಇತಿಹಾಸದಲ್ಲಿ ಮೂರನೇ ಗಲ್ಲುಶಿಕ್ಷೆ ನೀಡಿದ ಪ್ರಕರಣ ಇದಾಗಿದೆ. ಬೈಂದೂರು ತಾಲೂಕಿನ ಗಂಗನಾಡು ನಿವಾಸಿಯಾಗಿರುವ ಶಂಕರನಾರಾಯಣ ಹೆಬ್ಬಾರ್ (47) ಎಂಬಾತನೇ ನೇಣಿಗೆ ಕೊರಳೊಡ್ಡುವ ಶಿಕ್ಷೆಗೆ ಗುರಿಯಾದ ಪಾಪಿ ಅಪ್ಪ.
2016ರ ಅಕ್ಟೋಬರ್ 16ರಂದು ರಾತ್ರಿ ಮಲಗುವ ಮುನ್ನ ತಾನೇ ಸಿದ್ಧ ಪಡಿಸಿದ ಊಟದಲ್ಲಿ ವಿಷ ಬೆರೆಸಿ ಮಕ್ಕಳಿಗೆ ಹಾಗು ಪತ್ನಿಗೆ ನೀಡಿ ತಾನೂ ಉಂಡು ಮಲಗಿದ್ದು, ಮಾರನೆ ದಿನ ಬೆಳಿಗ್ಗೆ ಎದ್ದು ನೋಡುವಾಗ ಮಗ ಅಶ್ವಿನ್ಕುಮಾರ್(16), ಮಗಳು ಐಶ್ವರ್ಯ ಲಕ್ಷ್ಮೀ(14) ಸಾವನ್ನಪ್ಪಿದ್ದರು. ಮತ್ತು ಪತ್ನಿ ಮಹಾಲಕ್ಷ್ಮೀ ಗಂಭೀರ ಸ್ತಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಸುಧಾರಿಸಿದ್ದರು. ಆರೋಪಿ ಶಂಕರನಾರಾಯಣ ಹೆಬ್ಬಾರ್ ಮಾತ್ರ ಆಹಾರ ಕಡಿಮೆ ಸೇವಿಸಿದ್ದರಿಂದ ಬದುಕುಳಿದಿದ್ದ. ಕೆಲಸದಾಕೆಯೊಂದಿಗೆ ಸಂಬಂಧ ಹೊಂದಿದ್ದು, ಆಕೆ ಬೇರೆ ಮದುವೆಯಾಗಿರುವುದರಿಂದ ಆಕೆಯನ್ನು ಬಿಟ್ಟು ಬದುಕುವುದು ಅಸಾಧ್ಯ. ನಾನಿಲ್ಲದೇ ನನ್ನ ಕುಟುಂಬವೂ ಬದುಕುವುದು ಅಸಾಧ್ಯ. ಹಾಗಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಆಕೆ ಅಂತಿಮ ದರ್ಶನ ಪಡೆದ ಮೇಲೆಯೇ ನಮ್ಮ ಅಂತ್ಯಕ್ರಿಯೆ ನಡೆಸಬೇಕು ಎಂಬುದಾಗಿ ಹೆಬ್ಬಾರ್ 16 ಪುಟಗಳ ಡೆತ್ ನೋಟ್ ಬರೆದಿಟ್ಟಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೆಬ್ಬಾರ್ ಪತ್ನಿ ಸಹಿತ 17 ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದು, ಶನಿವಾರ ತೀರ್ಪು ಹೊರಬಿದ್ದಿದೆ. ಆರೋಪಿ ವಿರುದ್ಧ ಮಾಡಲಾದ ಕೊಲೆ/ಸೆಕ್ಷನ್ 302ಗೆ ಮರಣದಂಡನೆ ಶಿಕ್ಷೆ, ಕೊಲೆಯತ್ನ/ಸೆಕ್ಷನ್ 307ಗೆ 7ವರ್ಷ ಕಠಿಣ, 10 ಸಾವಿರ ದಂಡ ತಪ್ಪಿದಲ್ಲಿ 1 ತಿಂಗಳು ಸಾದಾ ಶಿಕ್ಷೆ, ವಿಷವುಣಿಸಿದ್ದಕ್ಕೆ (ಸೆಕ್ಷನ್ 328)ರಡಿಯಲ್ಲಿ 10 ವರ್ಷ ಕಠಿಣ, 10 ಸಾವಿರ ದಂಡ ತಪ್ಪಿದಲ್ಲಿ 2 ತಿಂಗಳು ಸಾದಾ, ಸಾಕ್ಷ್ಯನಾಶ (ಸೆಕ್ಷನ್ 202) ಮಾಡಿದ್ದಕ್ಕೆ 7 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ. ಆತ್ಮಹತ್ಯೆ ಯತ್ನ (ಸೆಕ್ಷನ್309)ಕ್ಕೆ 6 ತಿಂಗಳು ಸಾದಾ ಶಿಕ್ಷೆ ವಿಧಿಸಲಾಗಿದೆ. ಪತ್ನಿಯು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಕಂಡುಕೊಳ್ಳಬಹುದೆಂದು ನ್ಯಾಯಾಧೀಶರು ತಿಳಿಸಿದ್ದಾರೆ. ಶಿಕ್ಷೆ ಪ್ರಮಾಣ ಪ್ರಕಟ ಕುರಿತು ವಾದ ಮಂಡನೆ ವೇಳೆ ಅಪರಾಧಿಗೆ ಕಾನೂನು ವ್ಯಾಪ್ತಿಯಲ್ಲಿ ಗರಿಷ್ಟ ಶಿಕ್ಷೆ ನೀಡಲು ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.