ಬಂಟ್ವಾಳ, ಜು 05(DaijiworldNews/SM): ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲ್ಲಡ್ಕದಲ್ಲಿ ಹೆದ್ದಾರಿಯ ಸ್ಥಿತಿ ಪೂರ್ಣ ಅಲ್ಲೋಲಕಲ್ಲೋಲವಾಗಿದ್ದು, ಇಲ್ಲಿನ ಸಂಪೂರ್ಣ ಚಿತ್ರಣ ಇಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಮಂಗಳೂರು - ಬೆಂಗಳೂರು ಮಧ್ಯೆ ಕಲ್ಲಡ್ಕದ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ. ಕಲ್ಲಡ್ಕದಲ್ಲಿ ಚತುಷ್ಪಥ ಹೆದ್ದಾರಿಯ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಹಳೆಯ ರಸ್ತೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಪ್ರತ್ಯೇಕ ಡಾಮರು ರಸ್ತೆ ನಿರ್ಮಾಣ ಮಾಡಿ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಬದಲಿ ರಸ್ತೆ ವಾರದ ಹಿಂದೆಯೇ ಮಳೆಗೆ ಹಾನಿಗೊಳಗಾಗಿದ್ದು, ರಸ್ತೆಯೇ ಮಾಯವಾಗಿದೆ. ಎಲ್ಲೆಂದರಲ್ಲಿ ನೀರು ನಿಂತು, ಕಲ್ಲಡ್ಕ ಪೇಟೆ ಸಣ್ಣ ತೋಡಿನಂತಾಗಿದೆ.
ಬಿಸಿರೋಡು - ಅಡ್ಡಹೊಳೆ ವರೆಗೆ ಚತುಷ್ಪತ ಹೆದ್ದಾರಿ ಕಾಮಗಾರಿ ಬೇಸಿಗೆ ಕಾಲದಲ್ಲಿ ಆರಂಭವಾಗಿದ್ದು, ಬೇಸಿಗೆ ಕಾಲದಲ್ಲಿ ಧೂಳಿನ ಸಮಸ್ಯೆಯಾದರೆ ಮಳೆಗಾಲದಲ್ಲಿ ಹೊಂಡಗುಂಡಿ, ರಸ್ತೆ ತುಂಬಾ ನೀರು, ಚರಂಡಿ ಅವ್ಯಸ್ಥೆ, ಗುಡ್ಡಗಳು ಜರಿದು ರಸ್ತೆ ತಡೆ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳ ಪಟ್ಟಿಯ ಸಾಲು ಮುಂದೆ ಹೋಗಬಹುದು.
ಕಾಮಗಾರಿ ವಹಿಸಿಕೊಂಡ ಕಂಪೆನಿ ಬದಲಿ ರಸ್ತೆ ನಿರ್ಮಾಣ ಮಾಡಿದ ಬಳಿಕ ಹಳೆಯ ರಸ್ತೆಯನ್ನು ಕೆಡವಬೇಕಿತ್ತು. ಕೆ.ಎನ್.ಆರ್.ಸಿ.ಖಾಸಗಿ ಸಂಸ್ಥೆ ಈ ಕಾಮಗಾರಿ ಯ ಗುತ್ತಿಗೆ ವಹಿಸಿ ಕೊಂಡಿದ್ದು, ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ.
ಅದರೆ ಮಳೆಗಾಲದಲ್ಲಿ ರಸ್ತೆಯ ನೀರು ಹರಿದು ಹೋಗಲು ಸರಿಯಾದ ಚರಂಡಿ ನಿರ್ಮಾಣ ಆಗಿಲ್ಲವಾದ್ದರಿಂದ ರಸ್ತೆಯಲ್ಲಿ ನೀರು ಶೇಖರಣೆ ಯಾಗಿದೆ. ಅಗಲೀಕರಣ ಮಾಡಲಾದ ಕೆಲವು ಕಡೆಗಳಲ್ಲಿ ಗುಡ್ಡ ಜರಿದು ಬೀಳುತ್ತಿದೆ.
ರಸ್ತೆ ಬದಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳು ಕೆಲವು ಕಡೆಗಳಲ್ಲಿ ಬಿದ್ದರೆ ಉಳಿದ ಬಹುತೇಕ ಕಡೆಗಳಲ್ಲಿ ವಾಲಿ ನಿಂತಿದೆ.
ವಾಹನ ಸವಾರರು ಸಂಚರಿಸುವ ವೇಳೆ ಯಾವ ಹೊತ್ತಿಗೆ ವಿದ್ಯುತ್ ಕಂಬಗಳು ಬೀಳುತ್ತದೆ, ಅಥವಾ ಗುಡ್ಡ ಜರಿಯುತ್ತದೆ ಎಂಬ ಹೆದರಿಕೆಯಲ್ಲಿ ವಾಹನ ಸವಾರರು ಸಂಚಾರ ಮಾಡಬೇಕಾದ ಅನಿವಾರ್ಯ ತೆ ಇಲ್ಲಿದೆ.
ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸಬೇಕಾದ ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಅದೋಗತಿಗೆ ಇಳಿದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮಳೆಗಾಲದ ಸ್ಥಿತಿ ಗತಿಯ ಬಗ್ಗೆ ಸಂಪೂರ್ಣ ಅರಿತುಕೊಂಡು ಕಾಮಗಾರಿ ಆರಂಭಿಸಿ ದ್ದರೆ ಜನರಿಗೆ ಇಷ್ಟೊಂದ ಸಮಸ್ಯೆ ಆಗುತ್ತಿರಲಿಲ್ಲ.