ಉಡುಪಿ, ಜು 05 (DaijiworldNews/DB): ಪರ್ಕಳ ತಿರುವಿನಲ್ಲಿ ಎರಡು ದಿನಗಳ ಹಿಂದೆ ಮಗುಚಿ ಬಿದ್ದ ಲಾರಿ ಮೇಲೆತ್ತುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಪರ್ಕಳದಲ್ಲಿ ಬೃಹತ್ ಮಟ್ಟದ ಟ್ರಾಫಿಕ್ ಜಾಂ ಉಂಟಾಯಿತು.
ರವಿವಾರ ರಾತ್ರಿ ಪರ್ಕಳ ತಿರುವಿನಲ್ಲಿ ಲಾರಿ ಮಗುಚಿ ಬಿದ್ದಿತ್ತು. ಇದೀಗ ಕಳೆದ ಮೂರ್ನಾಲ್ಕು ಗಂಟೆಗಳಿಂದ ಲಾರಿ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಎರಡು ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ ಪರ್ಕಳದ ಎರಡೂ ಕಡೆ ಬೃಹತ್ ಟ್ರಾಫಿಕ್ ಜಾಂ ಉಂಟಾಗಿದ್ದರಿಂದಾಗಿ ಉಡುಪಿ ಪರ್ಕಳದ ಮಧ್ಯೆ ರಸ್ತೆ ಸಂಚಾರದಲ್ಲಿ ತೊಡಕುಂಟಾಗಿದೆ. ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿವೆ. ಕಾದು ಕಾದು ಸುಸ್ತಾಗಿ ಹಲವರು ನಡೆದುಕೊಂಡೇ ತೆರಳಿದ್ದಾರೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಕಾರ್ಕಳ, ಉಡುಪಿ, ಧರ್ಮಸ್ಥಳ, ಮಣಿಪಾಲ, ಹಿರಿಯಡ್ಕ ಕಡೆ ಸಂಚರಿಸುವ ಬಸ್, ಕಾರು, ದ್ವಿಚಕ್ರ, ಘನ ವಾಹನಗಳ ಸಂಚಾರ ಬಂದ್ ಆಗಿದೆ.