ಕುಂದಾಪುರ, ಜು 05 (DaijiworldNews/DB): ಕಳೆದ ನಾಲ್ಕು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಸೌಪರ್ಣಿಕ ನದಿ ಉಕ್ಕಿ ಹರಿಯುತ್ತಿದ್ದು ನದಿ ಸಮೀಪದ ಪ್ರದೇಶಗಳಿಗೆ ಮುಳುಗಡೆ ಭೀತಿ ಎದುರಾಗಿದೆ.
ಸಾಲ್ಬುಡ-ನಾವುಂದ ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಅರೆಹೊಳೆ ಮುಂತಾದ ಪ್ರದೇಶಗಳು ಮುಳುಗಡೆ ಭೀತಿಯಲ್ಲಿದೆ. ಸೌಪರ್ಣಿಕ ನದಿಯ ತಟದ ಸಾವಿರಾರು ಎಕರೆ ಕೃಷಿ ಭೂಮಿಗಳು ನೆರೆಯಿಂದ ಸಂಪೂರ್ಣ ಜಲಾವೃತವಾಗಿದೆ. ಈ ಭಾಗದ ಸ್ಥಳೀಯರು ಜಾನುವಾರುಗಳನ್ನು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ವಿಪರೀತ ಗಾಳಿಯ ರಭಸಕ್ಕೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ಸ್ಥಳಕ್ಕೆ ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮಳೆಯಿಂದಾಗಿ ನೆರೆ ನೀರು ಹೆಚ್ಚಿರುವಲ್ಲಿ ಜನರಿಗೆ ಅಗತ್ಯ ಮುನ್ಸೂಚನೆ ನೀಡಲಾಗಿದೆ. ಅನಿವಾರ್ಯತೆ ಬಿದ್ದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುತ್ತದೆ. ದೋಣಿ ಬೇಡಿಕೆ ಇರುವಲ್ಲಿ ಅದರ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸೇಪ್ಟಿ ಜಾಕೆಟ್ ಬೇಡಿಕೆಯಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಕುಂದಾಪುರ ಗ್ರಾಮ ಲೆಕ್ಕಿಗ ಹನುಮಂತ ರಾಯ್, ಪಿಡಿಒ ಪ್ರಕಾಶ್, ಬೈಂದೂರು ಗ್ರಾಮ ಲೆಕ್ಕಿಗ ಮಂಜುನಾಥ ಬಿಲ್ಲವ, ರಾಕೇಶ್ ಬಡಾಕೆರೆ, ಕಾರ್ಯದರ್ಶಿ ಪಾರ್ವತಿ ಉಪಸ್ಥಿತರಿದ್ದರು