ಉಡುಪಿ, ಜು 05 (DaijiworldNews/DB): ಉಡುಪಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಹಲವು ರಸ್ತೆಗಳು ಜಲಾವೃತಗೊಂಡಿವೆ. ಸಮುದ್ರ ಬದಿಯಲ್ಲಿ ವಾಸಿಸುತ್ತಿರುವವರಿಗೆ ವಿಪರೀತ ಮಳೆಯು ಆತಂಕ ತಂದೊಡ್ಡಿದ್ದು, ತಗ್ಗು ಪ್ರದೇಶಗಳಲ್ಲಿ, ಗದ್ದೆಗಳಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ.
ಈಗಾಗಲೇ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಬ್ರಹ್ಮಾವರ ಭಾಗದ ಮಟಪಾಡಿ, ಉಪ್ಪೂರು, ಹೆಬ್ರಿ, ಬಾರಕೂರು, ಕಾಪು ಭಾಗದ ಕಟಪಾಡಿ, ಮೂಳೂರು, ಕಲ್ಯಾಣಪುರ ಭಾಗದಲ್ಲಿ ನೀರು ಸಮುದ್ರ ಮಟ್ಟಕ್ಕಿಂತ ಮೇಲೆ ಬಂದಿದ್ದು, ನೆರೆ ಭೀತಿ ಎದುರಾಗಿದೆ.
ಉಡುಪಿ ರಾಷ್ಟೀಯ ಹೆದ್ದಾರಿ 66 ಕರಾವಳಿ ಜಂಕ್ಷನ್ನ ಇಕ್ಕೆಲಗಳಲ್ಲಿ ರಸ್ತೆ ಜಲಾವೃತವಾಗಿದ್ದು, ವಾಹನ ಚಾಲಕರು, ಸಾಮಾನ್ಯ ಜನರು ರಸ್ತೆ ದಾಟಲು ಪರದಾಟುವಂತಾಗಿದೆ. ಉಪ್ಪೂರಿನಲ್ಲಿ ನದಿ ನೀರು ಅಪಾಯದ ಮಟ್ಟ ಮೀರಿದ್ದು, ನದಿ ದಂಡೆಯಲ್ಲಿರುವ ಜನರು ಆತಂಕ ವ್ಯಕ್ತ ಪಡಿಸಿದ್ದಾರೆ.
ಉಡುಪಿ ನಗರ ಭಾಗದಲ್ಲಿರುವ ಕೆಲವು ತಗ್ಗು ಪ್ರದೇಶಗಳಾದ ಉಡುಪಿ, ದೊಡ್ಡಣಗುಡ್ಡೆ, ಮಣಿಪಾಲ, ಪೆರಂಪಳ್ಳಿ, ಪರ್ಕಳ, ಮಲ್ಪೆ, ಪ್ರದೇಶಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೀರು ತುಂಬಿದೆ. ಬನ್ನಂಜೆಯ ಮೂಡನಿಡಂಬೂರು ಭಾಗದಲ್ಲಿ ರಸ್ತೆ ಮೇಲೇ ನೀರು ತುಂಬಿ ಹಲವು ಮನೆಗಳು ಜಲಾವೃತವಾಗಿವೆ. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಸುರಕ್ಷತೆ ಕ್ರಮ ಕೈಗೊಂಡಿದ್ದಾರೆ.