ಮಂಗಳೂರು, ಜ19(SS): ಸುಮ್ಮನೆ ಡೊಂಬರಾಟ ಮಾಡಿ ರಾಜಕೀಯ ಹಿತಾಸಕ್ತಿ ಬಲಿಕೊಡಬೇಡಿ. ರಾಜ್ಯದಲ್ಲಿ ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು ಬಿಡಿ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂಬಾಲಕರನ್ನು ಬಿಟ್ಟು ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಒಂದೆಡೆಯಿಂದ ಸಮಾಧಾನ ಮಾಡುವ ನಾಟಕ, ಮತ್ತೊಂದೆಡೆ ಒಳಗಿಂದೊಳಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ರಾಜಕಾರಣವನ್ನು ಹೇಸಿಗೆಯ ತಾಣವಾಗಿ ಪರಿವರ್ತನೆ ಮಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ನನೆಗುದಿಗೆ ಬಿದ್ದಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳಿದರು.
ಹಾಳು ರಾಜಕೀಯದ ಮಧ್ಯೆ ಜನರಿಗೆ ಆಗುತ್ತಿರುವ ಅನ್ಯಾಯ ಯಾರಿಗೂ ಕಾಣುತ್ತಿಲ್ಲ. ಕಾಂಗ್ರೆಸ್ ರಾಜ್ಯದ ರಾಜಕಾರಣವನ್ನು ನಗೆಪಾಟಲನ್ನಾಗಿ ಮಾಡಿದೆ. ಏಡಿಗಳನ್ನು ತಟ್ಟೆಯಲ್ಲಿ ಹಾಕಿದರೆ ಪರಸ್ಪರ ಕೈ-ಕಾಲು ಎಳೆಯುವ ರೀತಿಯಲ್ಲಿ ಕಾಂಗ್ರೆಸ್ ಕಚ್ಚಾಟವಿದೆ ಎಂದು ತಿಳಿಸಿದರು.
ಜನರಿಗೆ ಆಗುತ್ತಿರುವ ಅನ್ಯಾಯವನ್ನು ನೋಡಲು ಆಗುತ್ತಿಲ್ಲ, ನಿಮಗೆ ಅಧಿಕಾರ ನಡೆಸಲು ಸಾಧ್ಯವಾಗದಿದ್ದಾರೆ ಬಿಟ್ಟುಬಿಡಿ, ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ.