ಉಡುಪಿ, ಜು 05(DaijiworldNews/MS): ಸೈಕಲ್ ಗೆ ಬೊಲೆರೋ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಅಂಬಲಪಾಡಿ ಜಂಕ್ಷನ್ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಗಾಯಗೊಂಡ ಬಾಲಕನನ್ನು ಖಾಸಗಿ ಪ್ರೌಢಶಾಲೆಯ ವಿದ್ಯಾರ್ಥಿ ಆದಿತ್ಯ ಪಿ. ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ವಿಶು ಶೆಟ್ಟಿ ಅವರು ಸಾರ್ವಜನಿಕರ ನೆರವಿನಿಂದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ.
ಎಂದಿನಂತೆ ಸೈಕಲ್ ಮೂಲಕ ಶಾಲೆಗೆ ಹೊರಟಿದ್ದ ಆದಿತ್ಯನಿಗೆ ಅಂಬಲಪಾಡಿ ಜಂಕ್ಷನ್ನಲ್ಲಿ ಅತೀ ವೇಗದಿಂದ ಬಂದ ಬೊಲೆರೋ ಟೆಂಪೊ ಡಿಕ್ಕಿ ಹೊಡೆದಿದೆ. ಬಾಲಕ ತೀವ್ರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ತಕ್ಷಣ ಸಮೀಪದ ಹೈಟೆಕ್ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಅಲ್ಲಿನ ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.
ಟೆಂಪೋ ಚಾಲಕನ ಅತೀ ವೇಗದ ಚಾಲನೆಯೇ ದುರ್ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಂಗಳವಾರ ಬೆಳಗ್ಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ರಜೆ ಘೋಷಣೆ ವಿಳಂಬವಾದ ಕಾರಣ ಅನೇಕ ಮಕ್ಕಳು ಶಾಲೆ ತನಕ ಹೋಗಿ ಮತ್ತೆ ಹಿಂದೆ ಬಂದಿರುವ ಮಾಹಿತಿ ಇದೆ. ಆದಿತ್ಯ ಕೂಡಾ ರಜೆಯ ಬಗ್ಗೆ ಮಾಹಿತಿಯಿಲ್ಲದೆ ಎಂದಿನಂತೆ ಸೈಕಲ್ ಏರಿ ಶಾಲೆಗೆ ಹೊರಟಿದ್ದು, ಅಂಬಲಪಾಡಿ ಜಂಕ್ಷನ್ ಬಳಿ ದುರ್ಘಟನೆಗೀಡಾಗಿದ್ದಾನೆ.