ವಿಟ್ಲ, ಜು 05 (DaijiworldNews/DB): ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಸಾರಡ್ಕ ಚೆಕ್ಪೋಸ್ಟ್ ಬಳಿ ಗುಡ್ಡ ಕುಸಿತಗೊಂಡು ಕರ್ನಾಟಕ-ಕೇರಳ ನಡುವಿನ ಸಂಚಾರ ಮೊಟಕುಗೊಂಡಿದೆ.
ಗುಡ್ಡ ಕುಸಿತದಿಂದಾಗಿ ರಸ್ತೆಗೆ ಅಪಾರ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ಅಲ್ಲದೆ, ಬೈಕೊಂದು ಮಣ್ಣಿನಡಿ ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ. ಗಿಡಗಂಟಿಗಳೂ ರಸ್ತೆಗೆ ಬಿದ್ದಿದೆ. ಮಣ್ಣು ರಸ್ತೆಗೆ ಕುಸಿದಿರುವುದರಿಂದ ಎರಡೂ ಕಡೆಯಿಂದ ಬರುವ ವಾಹನಗಳ ಸಂಚಾರಕ್ಕೆ ತೊಡಕಾಗಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ವಿಟ್ಲ ಮಾರ್ಗವಾಗಿ ಪೆರ್ಲ, ಬದಿಯಡ್ಕ, ಕಾಸರಗೋಡು ನಡುವೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕುಡ್ತಮುಗೇರು ಬಳಿ ನದಿ ನೀರು ಪ್ರಮಾಣ ಜಾಸ್ತಿಯಾಗುತ್ತಿದ್ದು, ರಸ್ತೆಗೆ ನೀರು ಬಂದಲ್ಲಿ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.