ಮಂಗಳೂರು,ಜು 05(DaijiworldNews/MS): ದಕ್ಷಿಣ ಕನ್ನಡ ಬುದ್ದಿವಂತರ ಜಿಲ್ಲೆ.! ಈ ಜಿಲ್ಲೆಯ ಪ್ರಮುಖ ನಗರ ಮಂಗಳೂರು. ಕಡಲ ತೀರದ ನಗರ ಮತ್ತಷ್ಟು ಸ್ಮಾರ್ಟ್ ಆಗಿ ರೂಪುಗೊಳ್ಳಲು ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ 1659 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ.
ಅಮೆರಿಕಾ ಸಹಿತ ವಿದೇಶಗಳ ನಗರಗಳಂತೆ ನಮ್ಮ ದೇಶದ ನಗರಗಳೂ ಪಾರಂಪರಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮಾರ್ಟ್ ಸಿಟಿ ಪರಿಕಲ್ಪನೆ ಸಾಕಾರಗೊಳಿಸುತ್ತಿದ್ದಾರೆ. ಸ್ಮಾರ್ಟ್ ಸಿಟಿ ಮೂಲಕ ಮಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳು ವೇಗದಿಂದ ನಡೆಯುತ್ತಿವೆ. ಆದರೆ ಈ ಅಭಿವೃದ್ದಿ ಕಾರ್ಯದಲ್ಲಿ ಹಲವೆಡೆ ಅಧ್ವಾನಗಳೇ ತುಂಬಿ ತುಳುಕುತ್ತಿದೆ. ಇಂಥ ಎಡವಟ್ಟುಗಳ ಸಚಿತ್ರ ವರದಿ ಇಲ್ಲಿದೆ ನೋಡಿ:
ಅಧ್ವಾನ ನಂ 1: ಜಂಪ್ ಮಾಡಿ ಝೀಬ್ರಾ ಕ್ರಾಸಿಂಗ್ ಮಾಡಿ.!
ಹಂಪನಕಟ್ಟೇಯಲ್ಲಿ ಸುಗಮ ಸಂಚಾರಕ್ಕೆ, ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಜೀಬ್ರಾ ಕ್ರಾಸಿಂಗ್ ಹಾಕಲಾಗಿದ್ದು, ಆದರೆ ಪಾದಚಾರಿ ಮಾರ್ಗದಲ್ಲಿ ರೆಲೀಂಗ್ ಹಾಕಲಾಗಿದ್ದು, ಇದನ್ನು ಬಳಕೆ ಮಾಡಬೇಕೆಂದರೆ ಸಾರ್ವಜನಿಕರು ರೇಲಿಂಗ್ ಜಂಪ್ ಮಾಡಿ ರಸ್ತೆ ದಾಟಬೇಕಿತ್ತು..ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಈ ಪೋಟೋ ವೈರಲ್ ಆಗುತ್ತಿದ್ದಂತೆಯೇ ರೆಲೀಂಗ್ ತೆಗೆದು ಹಾಕಲಾಗಿದೆ.
ಅಧ್ವಾನ ನಂ 2: ಪುಟ್ ಪಾತ್ ನಟ್ಟನಡುವೆ ಕಂಬ, ದಾರಿಹೋಕರೇ ಎಚ್ಚರ, ನುಸುಳಿ ಹೋಗಿ .!
ನಗರದ ಪಿವಿಎಸ್ ಜಂಕ್ಷನ್ ಸಮೀಪ ಎಲೆಕ್ಟ್ರಿಕ್ ಕಂಬವನ್ನು ತೆರವುಗೊಳಿಸದೇ ಹೇಗಿದೆ ಹಾಗೆಯೇ ಕಾಮಗಾರಿ ನಡೆಸಲಾಗಿದ್ದು ಈ ಮಾರ್ಗದಲ್ಲಿ ಪಾದಚಾರಿಗಳು ನುಸುಳಿಕೊಂಡು ಹೋಗಬೇಕಾಗಿದೆ. ದಾರಿ ಮದ್ಯೆ ಕಂಬವಿರುವ ಕಾರಣ ಪಾದಚಾರಿಗ್ಳ ಸಂಚಾರಕ್ಕೆ ಅಡ್ಡಿಯಾಗಿ ಮಳೆಗಾಲದಲ್ಲಿ ಅಪಾಯ ಉಂಟುಮಾಡುವ ಸಾಧ್ಯತೆಯೇ ಅಧಿಕ. ಹೀಗಾಗಿ ಸ್ಮಾರ್ಟ್ ವರ್ಕ್ ಮೆಚ್ಚಲೇ ಬೇಕು.!
ಅಧ್ವಾನ ನಂ 3:ರಸ್ತೆ ನಡುವಿನಲ್ಲಿದೆ ವಿದ್ಯುತ್ ಕಂಬ, ಚಾಲಕರೇ ಜೋಪಾನ.!
ನಗರದ ಜೈಲ್ ರೋಡ್ ನಲ್ಲಿ ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದು, ವಾಹನ ಸವಾರ ಎಚ್ಚರ ತಪ್ಪಿದರೆ ಕಂಬಕ್ಕೆ ಢಿಕ್ಕಿ ಗ್ಯಾರಂಟಿ.! ದಿನನಿತ್ಯ ಸಾಗುವ ನೂರಾರು ವಾಹನಗಳು ಕಂಬ ತಪ್ಪಿಸಿಕೊಂಡು ಹೋಗುವಂತೆ ವಾಹನ ಜಾಗರೂಕತೆಯಿಂದ ಚಲಾಯಿಸಬೇಕಾಗುತ್ತದೆ.
ಅಧ್ವಾನ ನಂ 4: ಕಾಂಕ್ರಿಟ್ ರಸ್ತೆಯಲ್ಲಿ ಡಾಮಾರು ರಸ್ತೆ’ ಯಾರದ್ದೋ ದುಡ್ದಲ್ಲಿ ಜಾತ್ರೆ.!
ನಗರದ ಕೊಡಿಯಾಲ್ ಬೈಲ್ ಕಾಂಕ್ರಿಟ್ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ನಡೆದಿದ್ದು, ಈ ರಸ್ತೆಯಲ್ಲಿ ಕಾಂಕ್ರಿಟ್ ಮಧ್ಯೆ ತಾತ್ಕಲಿಕವಾಗಿ ಡಾಮಾರು ರಸ್ತೆ ನಿರ್ಮಿಸಲಾಗಿದೆ. ಇದರ ಕಾಮಗಾರಿ ಎಷ್ಟು ಕಳಪೆಯಾಗಿದೆ ಎಂದರೆ ಒಂದೇ ದಿನಕ್ಕೆ ಜಲ್ಲಿ, ಡಾಮಾರು ಚಲ್ಲಾಪಿಲ್ಲಿಯಾಗುವಷ್ಟು.!
ಅಧ್ವಾನ ನಂ 5:ಫುಟ್ ಪಾತ್ ಪಾರ್ಕಿಂಗ್
ನಗರದ ನಾನಾ ಕಡೆ ಪುಟ್ ಪಾತ್ ಅಗಲೀಕರಣ ಮಾಡಲಾಗುತ್ತಿದ್ದು, ಇದು ಸಂಬಂದಪಟ್ಟ ಕಟ್ಟಡದ ಪಾರ್ಕಿಂಗ್ ಗೆ ಅನುವು ಮಾಡಿಕೊಟ್ಟಂತಾಗಿದ್ದು ಪಾದಚಾರಿಗಳು ರಸ್ತೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ.