ಮಂಗಳೂರು: ಜು 04 (DaijiworldNews/SM): ಕಳೆದ ನಾಲ್ಕು ದಿನಗಳಿಂದ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪೌರ ಕಾರ್ಮಿಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭರವಸೆಯ ಮೇರೆಗೆ ಸೋಮವಾರ ಸಂಜೆ ಮುಷ್ಕರ ಕೈ ಬಿಟ್ಟಿದ್ದಾರೆ. ಅಲ್ಲದೆ ಎಂದಿನಂತೆ ತ್ಯಾಜ್ಯ ಸಂಗ್ರಹಿಸಿ ನಗರದ ಸ್ಚಚ್ಛತೆಗೆ ಮುಂದಾಗಿದ್ದಾರೆ.
ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ಗಳಲ್ಲಿ ಸ್ವಚ್ಛತೆಯ ನಿಟ್ಟಿನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು, ವಾಹನ ಚಾಲಕರ ಹುದ್ದೆಗಳನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಪೌರ ಕಾರ್ಮಿಕರು ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಜು.1ರಂದು ಪ್ರತಿಭಟನೆ ಆರಂಭಿಸಿದ್ದರು. ಬೇಡಿಕೆಯನ್ನು ಸರಕಾರು ಈಡೇರಿಸದ್ದರಿಂದ ಪ್ರತಿಭಟನೆ ಮುಂದುವರಿದಿತ್ತು.
ಈ ಮಧ್ಯೆ ಸಂಘದ ರಾಜ್ಯ ಮುಖಂಡರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಮೇರೆಗೆ ಮಂಗಳೂರಿನಲ್ಲೂ ಪ್ರತಿಭಟನೆ, ಮುಷ್ಕರವನ್ನು ಕೈ ಬಿಡಲಾಯಿತು ಎಂದು ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಷ್ಕರದಿಂದಾಗಿ ಮನೆ, ಅಂಗಡಿಗಳ ಮುಂದೆ ತ್ಯಾಜ್ಯಗಳ ರಾಶಿ ಕಂಡು ಬಂದಿತ್ತು. ಆದರೆ ಈ ಬಗ್ಗೆ ಮಂಗಳೂರು ಮನಪಾ ಆಡಳಿತವು ಯಾವುದೇ ಪರ್ಯಾಯ ಕ್ರಮ ಕೈಗೊಳ್ಳದ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಸೋಮವಾರ ಸಂಜೆ ಪೌರ ಕಾರ್ಮಿಕರು ಮುಷ್ಕರ ಕೈ ಬಿಟ್ಟು ತ್ಯಾಜ್ಯ ಸಂಗ್ರಹಿಸಲು ನಿರ್ಧರಿಸಿದ ಕಾರಣ ಮನೆ ಮಂದಿ, ಅಂಗಡಿ ಮುಂಗಟ್ಟುಗಳ ಮಾಲಕರು, ಸಿಬ್ಬಂದಿ ವರ್ಗವು ನಿಟ್ಟುಸಿರು ಬಿಡುವಂತಾಗಿದೆ.