ಉಡುಪಿ, ಜು 04 (DaijiworldNews/HR): ರಾಜ್ಯ ಸರಕಾರ "ರಾಜ್ಯ ಕಂಬಳ ಸಮಿತಿ" ರಚನೆಯ ಬಗ್ಗೆ ಸುತ್ತೋಲೆ ನೀಡಿತ್ತು. ಇದರ ಬಗ್ಗೆ ಯಾವುದೇ ಕಂಬಳ ಸಮಿತಿಯ ಅಜೀವ ಸದಸ್ಯರೊಡನೆ ಚರ್ಚಿಸದೇ ತನ್ನ ಇಚ್ಚಾ ಪ್ರಕಾರವಾಗಿ ಕೆಲವರ ಹೆಸರನ್ನು ಬರೆದು ಸರಕಾರಕ್ಕೆ ಕಳುಹಿಸಿದ್ದಾರೆ. ಅದಲ್ಲದೆ ಕಾರ್ಕಳ ತಾಲೂಕಿನ ಕೆ. ಗುಣಪಾಲ್ ಕಡಂಬ ತನ್ನನ್ನು ತಾನೆ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ, ಜಿಲ್ಲಾ ಕಂಬಳ ಸಮಿತಿಯ ಯಾವುದೇ ಸದಸ್ಯತ್ವವನ್ನು ಹೊಂದಿರುವುದಿಲ್ಲ. ್ನಿಯಮ ವಲ್ಲಂಘಿಸಿ ಮಾಡಿರುವ ಸಮಿತಿಗೆ ಗುಣಪಾಲ ಕಡಂಬ ಗೌರವ ಸಲಹೆಗಾರರು ಮತ್ತು ವಕ್ತರಾಗಿರುತ್ತಾರೆ, ಎಂದು ಅದೇ ಸಂಘದ ಆಜೀವ ಸದಸ್ಯರಲ್ಲಿ ಒಬ್ಬರಾದ ಲೋಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.
ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸರಕಾರದಿಂದ ಕಂಬಳ ಸಮಿತಿಗೆ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಆಗಿದ್ದು, ಅದನ್ನು ಪಡೆದುಕೊಳ್ಳಲು ತರಾತುರಿಯಿಂದ 19 ಮಂದಿಯ ಹೆಸರುಗಳನ್ನ ರಾಜ್ಯ ಸಮಿತಿ ಸದಸ್ಯರಾಗಿ ಅನುಮೋದನೆ ನೀಡಲು ಕಳುಹಿಸಿದ್ದು, ಸಾಂಪ್ರದಾಯಿಕ ಸಮಿತಿಯನ್ನು ವಿಶ್ವಾಸಕ್ಕೆ ಪಡೆಯಲಿಲ್ಲ.
ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆ ಕಾಸರಗೋಡು ಸೇರಿ 11 ವರ್ಷಗಳ ಹಿಂದೆ ಜಿಲ್ಲಾ ಕಂಬಳ ಸಮಿತಿ ಸ್ಥಾಪನೆ ಮಾಡಲಾಗಿತ್ತು. ಅದಕ್ಕೆ ಅದರದ್ದೇ ಆದ ನಿಯಮಗಳನ್ನು ಬೈಲಾ ರೂಪಿಸಲಾಗಿದೆ. ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಒಂದಷ್ಟು ಜನರು ಸೇರಿಕೊಂಡು ಹೊಸ ಸಮಿತಿಯನ್ನು ರಚನೆ ಮಾಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಲ್ಲಿ ಒಟ್ಟು 90 ಮಂದಿ ಅಜೀವ ಸದಸ್ಯರಿದ್ದು, 35 ಸಾಮಾನ್ಯ ಸದಸ್ಯರನ್ನು, ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೇ ಸಭೆ ಕರೆಯದೇ ನಮಗೆ ನೋವುಂಟು ಮಾಡಿದ್ದಾರೆ.
ಎರಡನೆಯ ಕಾನೂನುಬಾಹಿರವಾಗಿ ರಚನೆಯಾದ ಸಮಿತಿಯನ್ನು ಪ್ರಶ್ನಿಸಿ, ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು ಅದನ್ನು ತಡೆ ಹಿಡಿದ ನಂತರ ಸಮಿತಿಯ ನಿಯಮದ ಪ್ರಕಾರ ಸಮಿತಿಯನ್ನು ರಚಿಸಲು ಜಿಲ್ಲಾ ಆದೇಶವನ್ನು ನೀಡಿತ್ತು.
ಈ ವ್ಯಕ್ತಿ ಕಂಬಳದಿಂದ ದೂರ ಉಳಿದುಕೊಂಡು, ಕಂಬಳ ನಿರ್ವಹಣೆ ಮತ್ತು ಸಂರಕ್ಷಣೆ ಎಂಬ ಆಕಾಡೆಮಿಯನ್ನು ಮಾಡಿ ಕೋಣದ ಯಜಮಾನರುಗಳಿಂದ ಹಾಗೂ ಕಂಬಳ ಅಭಿಮಾನಿಗಳಿಂದ ದೇಣಿಗೆಗಳನ್ನು ಸ್ವೀಕರಿಸಿ ಕರ್ನಾಟಕ ಸರಕಾರದಿಂದ ಸಹಾಯ ಧನ ಪಡೆದ ಯಾವುದೇ ಲೆಕ್ಕ ಪತ್ರವನ್ನು ಸರ್ಕಾರಕ್ಕೆ ಪ್ರಕಟಿಸದೇ ಘನ ಸರಕಾರವನ್ನು ವಂಚಿಸಿರುತ್ತಾರೆ, ಎಂದು ಲೋಕೇಶ್ ಶೆಟ್ಟಿ ಆರೋಪಿಸಿದ್ದಾರೆ.
ಇನ್ನು ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾನೆ ಎಂಬ ಒಂದೇ ಕಾರಣಕ್ಕೆ ತನ್ನ ಅಕಾಡೆಮಿಗೆ ಇನ್ನಷ್ಟು ಸಹಾಯ ಧನ ಬರಬೇಕು ಎಂಬ ದುರಾಸೆಯಿಂದ ಕಂಬಳದ ಹುಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಎಂಬ ವ್ಯಕ್ತಿಯ ಕೆಲವು ಓಟದ ದಾಖಲೆಗಳನ್ನು ಕಂಬಳ ಸಮಿತಿಯ ಯಾವುದೇ ಒಂದು ಪ್ರಮಾಣ ಪತ್ರ ಇರದೇ ಒಬ್ಬ ಕೋಣದ ಓಟದ ಸಮಯವನ್ನು ನಿಗದಿ ಪಡಿಸುವ ರತ್ನಾಕರ ನಿರ್ದೇಶನವನ್ನು ನೀಡಿ ಶ್ರೀನಿವಾಸ ಗೌಡ ಎಂಬ ಓಟಗಾರನ ಹೆಸರಿನಲ್ಲಿ ಕೆಲವು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುತ್ತಾರೆ.
ರತ್ನಾಕರ್ ಯಾವುದೇ ಸರಕಾರ ಪರವಾನಿಗೆ ಪಡೆಯದೇ ಕಂಬಳಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಹಾಗೇಯೆ ಸರಕಾರವನ್ನು ವಂಚಿಸಿ ಸರಕಾರಕ್ಕೆ ಸುಳ್ಳು ದಾಖಲೆಯನ್ನು ನೀಡಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯಿಂದ ಸಹಾಯ ಧನವನ್ನು ಪಡೆದಿರುತ್ತಾರೆ. ಹಾಗೂ ಯುವ ಓಟಗಾರರ ಮನೋಸೈರ್ಯವನ್ನು ಹಾಳು ಗೈದಿರುತ್ತಾರೆ .
ಸರಕಾರ ಈ ಸಮಿತಿಗೆ ಅಂಗೀಕರಿಸದೆ ಅನುಮತಿ ನೀಡದೆ ನ್ಯಾಯಯುತವಾಗಿ ಕಂಬಳ ಸಮಿತಿಯ ಅಜೀವ ಸದಸ್ಯರ, ವ್ಯವಸ್ಥಾಪಕರ, ಕೋಣಗಳ ಯಜಮಾನರುಗಳು ಹಾಗೂ ಕಂಬಳ ಅಭಿಮಾನಿಗಳ ಸಭೆಯನ್ನು ಕರೆದು ಘನ ಸರಕಾರದ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಬೇಕು ಹಾಗೂ ಕೆ. ಗುಣಪಾಲ ಕಡಂಬ, ಶ್ರೀನಿವಾಸ ಗೌಡ, ರತ್ನಾಕರ್ ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿರುವ ಪಿ. ಆರ್. ಶೆಟ್ಟಿ, ರೋಹಿತ್ ಹೆಗ್ಡೆ ಇವರನ್ನು ವಿಚಾರಿಸಿ ಕಂಬಳಕ್ಕೆ ಹಾಗೂ ಕಂಬಳ ಅಭಿಮಾನಿಗಳಿಗೆ ನ್ಯಾಯವನ್ನು ಒದಗಿಸಿ ಕೊಡಬೇಕಾಗಿ ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಧಾಕರ್ ಹೆರ್ಗ, ಜಿಲ್ಲಾ ಕಂಬಳ ಸಮಿತಿ ಉಡುಪಿ, ವೆಂಕಟ್ ಪೂಜಾರಿ, ಅಧ್ಯಕ್ಷರು ಬೈಂದೂರು ಕಂಬಳ ಸಮಿತಿ ಮತ್ತು ಪ್ರಮೋದ್ ಶೆಟ್ಟಿ, ಉಪಸ್ಥಿತರಿದ್ದರು.