ಕೋಲ್ಕತಾ, ಜ19(SS): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಣಿಸಲು ಸಂಪೂರ್ಣ ದೇಶವೇ ಒಂದಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಏಕೀಕೃತ ಭಾರತ ರ್ಯಾಲಿ'ಯಲ್ಲಿ ಪಾಲ್ಗೊಳ್ಳಲು ಕೋಲ್ಕತಾಗೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಓರ್ವ ಮಹಾನ್ ನಾಯಕಿ. ರಾಜಕೀಯಕ್ಕೆ ಇಂಥಹ ನಾಯಕರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ದೇವೇಗೌಡರು, ಕೆಲಕಾಲ ಚರ್ಚೆ ನಡೆಸಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಶಂಸಿಸಿರುವ ದೇವೇಗೌಡರು, ದೇಶದಲ್ಲಿ ಜಾತ್ಯತೀತ ಸರಕಾರ ಆಡಳಿತಕ್ಕೆ ಬರಲು ಐತಿಹಾಸಿಕ ಪ್ರಯತ್ನವಿದು ಎಂದು ಶ್ಲಾಘಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಣಿಸಲು ಸಂಪೂರ್ಣ ದೇಶವೇ ಒಂದಾಗಿದೆ. 2019ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ರಣಕಹಳೆ ಮೊಳಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.