ಕಾಸರಗೋಡು, ಜು 03 (DaijiworldNews/SM): ಗಲ್ಫ್ ಉದ್ಯೋಗಿ ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದೀಕ್(32) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆ ಮರೆಸಿ ಕೊಂಡಿರುವ ಏಳು ಮಂದಿ ಆರೋಪಿ ಗಳಿಗಾಗಿ ಕಾಸರಗೋಡು ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆ ಗೊಳಿಸಿದ್ದಾರೆ.
ಪೈವಳಿಕೆ ಕೇಂದ್ರೀಕರಿಸಿರುವ ಕೊಟೇಶನ್ ತಂಡದ ವಿರುದ್ಧ ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಲಾಗಿದೆ. ಈ ಪೈಕಿ ಇಬ್ಬರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೃತ್ಯದಲ್ಲಿ 15 ಮಂದಿ ಶಾಮೀಲಾಗಿದ್ದಾರೆನ್ನಲಾಗಿದ್ದು, ಈ ಪೈಕಿ ಐವರನ್ನು ಈಗಾಗಲೇ ಬಂಧಿಸಲಾಗಿದೆ. ಕೃತ್ಯದಲ್ಲಿ ನೇರವಾಗಿ ಶಾಮೀಲಾದ ಆರೋಪಿಗಳನ್ನು ಇನ್ನೂ ಬಂಧಿಸಲು ಸಾಧ್ಯವಾಗಿಲ್ಲ.
ಆರೋಪಿಗಳಿಗಾಗಿ ಕರ್ನಾಟಕ, ಗೋವಾ ಹಾಗೂ ಇತರ ಕಡೆಗಳಿಗೂ ತನಿಖೆಯನ್ನು ವಿಸ್ತರಿಸಲಾಗಿದೆ. ಪೈವಳಿಕೆ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಕೊಟೇಶನ್ ತಂಡ ಅಬೂಬಕ್ಕರ್ ನನ್ನು ಅಪಹರಿಸಿ ಕೊಲೆ ಮಾಡಿತ್ತು ಎಂದು ತನಿಖಾ ತಂಡ ಮಾಹಿತಿ ಕಲೆ ಹಾಕಿದೆ. ಜೂನ್ 26ರಂದು ಅಬೂಬಕ್ಕರ್ ಸಿದ್ದೀಕ್ ನನ್ನು ತಂಡವೊಂದು ಅಪಹರಿಸಿ ಕೊಲೆ ಮಾಡಿ ಬಂದ್ಯೋಡಿನ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ತೊರೆದು ಪರಾರಿಯಾಗಿತ್ತು.