ಕಾರ್ಕಳ, ಜು 03 (DaijiworldNews/HR): ಕಾಂಗ್ರೆಸ್ ದೇಶಕ್ಕೆ ಶಾಪ. ಕಾಂಗ್ರೆಸ್ ದೇಶದಲ್ಲಿ ಮುಕ್ತವಾಗುತ್ತ ಬರುತ್ತಿದೆ. ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿಯವರು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಹೇಳಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಹೇಳಿದರು.
ಬಿಜೆಪಿ ಯುವ ಮೋರ್ಚಾ ಉಡುಪಿ ಜಿ ಕಾರ್ಕಳ ಮಂಡಲ ಇದರ ವತಿಯಿಂದ ಬಿ.ಮಂಜುನಾಥ ಪೈ ಸಭಾಂಗಣದಲ್ಲಿ 1975ರ ತುರ್ತು ಪರಿಸ್ಥಿತಿಯ ಕರಾಳತೆ ಹಾಗೂ ಅಗ್ನಿಪಥ್ ಅಗತ್ಯ ಮತ್ತು ಅನಿವಾರ್ಯತೆ ಕುರಿತ ಅರಿವು ಕಾರ್ಯಕ್ರಮ ನಡೆಯಿತು.
ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತ್ಕುಮಾರ್ ಮಾತನಾಡಿ, ದೇಶದಲ್ಲಿ ಲಕ್ಷಾಂತರ ಭಾರತೀಯರ ಬಲಿದಾನವಾಗಿದೆ. ಎಲ್ಲರ ತ್ಯಾಗದಬಲದಿಂದ ದೇಶ ಸ್ವಾತಂತ್ರ್ಯವಾಗಿದೆ. ಯುವ ಶಕ್ತಿಯನ್ನು ನಂಬಿದ ಭಾರತಕ್ಕೆ ಯುವ ಶಕ್ತಿಯ ಅಗತ್ಯವಿದೆ. ರಾಷ್ಟ್ರೀಯತೆಯ ಧ್ಯೇಯ, ಶೈಕ್ಷಣಿಕ ಅಧ್ಯಯನ ಇಂದಿನ ಅಗತ್ಯವಾಗಿದೆ. ದೇಶದಲ್ಲಿ ಲಕ್ಷಾಂತರ ಮಂದಿ ಯುವ ಶಕ್ತಿಯನ್ನು ರಾಷ್ಟ್ರ ಶಕ್ತಿ ಎಂದು ನಂಬಿದ ದೇಶ ಭಾರತ. ಅಗ್ನಿಪಥವೆಂದರೆ ರಾಷ್ಟ್ರ ಶಕ್ತಿಯ ಅನಾವರಣವಾಗಿದೆ. ಭಾರತವನ್ನು ಇಂದು ಜಗತ್ತೇ ಪ್ರೀತಿಸುತ್ತದೆ. ಅಂತಹ ಗಟ್ಟಿ ತಾಕತ್ತು ಭಾರತಕ್ಕಿದೆ. ಶಾಂತಿ, ಸಮೃದ್ಧಿ, ಸುರಕ್ಷತೆಯನ್ನು ಸಮಾಜಕ್ಕೆ ಕೊಡುವ ದೊಡ್ಡ ಯುವ ಶಕ್ತಿ ಭಾರತಕ್ಕಿದೆ. ಇದು ರಾಷ್ಟ್ರಶಕ್ತಿಯ ಪಥವಿದು. ಜ್ಞಾನ, ತಿಳುವಳಿಕೆ, ಅನುಭವದ ಆಧಾರದ ಮೇಲೆ ಭಾರತ ನಿಂತಿದೆ ಎಂದರು.
ಪುಣ್ಯಪಾಲ್ ದಿಕ್ಸೂಚಿ ಭಾಷಣ ಮಾಡಿ, ರಾಷ್ಟ್ರದ ಮೇಲೆ ಸತತ ಅಕ್ರಮಣ ನಡೆದಾಗಲೂ ಮತ್ತೆ ಸ್ವಂತ ಬಲದಿಂದ ಮೇಲೆದ್ದು ಬಂದಿದೆ. ಸಂಪತ್ತು ಮಾತ್ರ ಲೂಟಿಯಾಗಿಲ್ಲ. ಸಂಸ್ಕೃತಿಯ ಮೇಲೂ ಧಾಳಿ ನಡೆದಿದೆ ಎಂದರು. ಯುವ ಮೋರ್ಚಾ ಅಧ್ಯಕ್ಷ ಸುಹಾಸ್ ಶೆಟ್ಟಿ ಮುಟ್ಲುಪ್ಪಾಡಿ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು.
ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ವಿಜಯೇಂದ್ರ ಕಿಣಿ ದಂಪತಿಗಳನ್ನು ಸಮ್ಮಾನಿಸಲಾಯಿತು.
ವಕೀಲ ಎಂ.ಕೆ ವಿಜಯಕುಮಾರ್ ಮಾತನಾಡಿದರು. ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ಅಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಯೊಗೀಶ್ ಸಾಲಿಯಾನ್, ಭರತ್ಕುಮಾರ್ ಜೈನ್, ಶರತ್ ಶೆಟ್ಟಿ ಉಪ್ಪುಂದ, ಶ್ವೇತಾ ಪೂಜಾರಿ, ಯುವ ಮೋರ್ಚಾದ ಶಕ್ತಿ ಕೇಂದ್ರದ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.