ಕಾರ್ಕಳ, ಜು 03 (DaijiworldNews/HR): ಕಳೆದ ನಲುವತ್ತೊಂದು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2021ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಬೆಂಗಳೂರಿನ ಡಾ.ಗಜಾನನ ಶರ್ಮ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಚಿಕ್ಕಮಗಳೂರಿನ ಡಾ. ಹೆಚ್.ಎಸ್.ಸತ್ಯನಾರಾಯಣ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿಯು ರೂಪಾ ಇಪ್ಪತ್ತೈದು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯು ರೂಪಾ ಹದಿನೈದು ಸಾವಿರದ ಗೌರವ ಸಂಭಾವನೆ, ತಾಮ್ರ ಪತ್ರದ ಜೊತೆ ಸನ್ಮಾನವನ್ನೂ ಒಳಗೊಂಡಿವೆ.
ಮೂಡುಬಿದಿರೆಯಲ್ಲಿ ನಿನ್ನೆ ವರ್ಧಮಾನ ಪ್ರಶಸ್ತಿ ಪೀಠದ ಮಹಾಸಭೆಯು ಪೀಠದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಸಾಲಿನ ತೀರ್ಪುಗಾರರಾದ ವಿಮರ್ಶಕ ಡಾ.ಬಿ.ಜನಾರ್ದನ ಭಟ್, ಪ್ರಾಧ್ಯಾಪಕ ಪ್ರೊ| ಬಿ.ಪಿ.ಸಂಪತ್ ಕುಮಾರ್ ಮತ್ತು ವಿಮರ್ಶಕ ಬೆಳಗೋಡು ರಮೇಶ ಭಟ್ ಅವರುಗಳುಳ್ಳ ತ್ರಿಸದಸ್ಯ ಸಮಿತಿಯು ನೀಡಿದ ಶಿಫಾರಸ್ಸಿನ ಆಧಾರದಲ್ಲಿ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.