ಮಂಗಳೂರು, ಜು 03 (DaijiworldNews/DB): ಕಳೆದ ಶುಕ್ರವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಳ್ಯ ತಾಲೂಕಿನ ವಿವಿಧೆಡೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಗುಡ್ಡ ಕುಸಿತದಿಂದಾಗಿ ಅನೇಕ ಮನೆಗಳಿಗೆ ಹಾನಿ ಉಂಟಾಗಿದ್ದು, ಕೃಷಿ ಚಟವಟಿಕೆಗಳು ಕೂಡಾ ನಾಶವಾಗಿವೆ.
ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಒಳಚರಂಡಿಯೊಳಗೆ ಮಣ್ಣು ತುಂಬಿದೆ. ಇದರಿಂದ ಮಳೆ ನೀರು ರಸ್ತೆ ಮೇಲೆ ಹರಿದು ಸಂಚಾರ ಸಂಕಟ ಎದುರಾಗಿದೆ. ಕೃಷಿ ಭೂಮಿಗೂ ನೀರು ಹರಿಯುತ್ತಿದ್ದು, ಬೆಳೆ ನಾಶಕ್ಕೆ ಕಾರಣವಾಗಿದೆ. ಊರುಬೈಲು ಪ್ರದೇಶದಲ್ಲಿ ಗುಡ್ಡವೊಂದು ಕುಸಿದು ಬಿದ್ದು, ಮನೆಳಿಗೆ ಹಾನಿ ಸಂಭವಿಸಿದೆ. ಜಯನಗರದ ಕೊಡಂಕೇರಿಯಲ್ಲಿ ಗುಡ್ಡ ಕುಸಿದು ಮನೆಯೊಂದರ ಒಂದು ಭಾಗ ಜರಿದು ಬಿದ್ದಿದೆ. ಕಳಂಜ ಗ್ರಾಮದಲ್ಲಿಯೂ ಮನೆಯೊಂದಕ್ಕೆ ಹಾನಿ ಉಂಟಾಗಿದೆ. ರಕ್ಷಣಾ ತಂಡವನ್ನು ನಿಯೋಜಿಸದಿರುವುದಕ್ಕೆ ಆಡಳಿತ ವ್ಯವಸ್ಥೆಯ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಳ್ಳಾಲದಲ್ಲಿ ಪಿ.ಕೆ. ಮೊಹಮ್ಮದ್ ಅವರ ಮನೆಯ ಬಳಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮಿಂಪ್ರಿಯಲ್ಲಿ ಮನೆಯೊಂದರ ಛಾವಣಿ ಕುಸಿತಕ್ಕೊಳಗಾಗಿದೆ. ಕೀನ್ಯಾ ಸಂಪರ್ಕಿಸುವ ಸೇತುವೆ ಬಳಿ ಕೃತಕ ನೆರೆ ಸೃಷ್ಟಿಯಾಗಿದೆ. ಕೊಣಾಜೆಯ ಗುಡ್ಡೆಕೊಪ್ಪಲದಲ್ಲಿ ಎರಡು ಕಂಪೌಂಡ್ ಗೋಡೆಗಳು ಕುಸಿದು ಬಿದ್ದಿವೆ.
ಸಜಿಪನಡು ಗ್ರಾಮದ ದೇರಾಜೆಯಲ್ಲಿ ದನದ ಹಟ್ಟಿಯೊಂದರ ಗೋಡೆಗೆ ಹಾನಿಯಾಗಿದೆ. ಇರಾ ಗ್ರಾಮದ ನಾಯರ್ಕೋಡಿಯಲ್ಲಿ ಜಾನುವಾರುಗಳ ಶೆಡ್ ಜರಿದು ಬಿದ್ದಿದೆ. ಸೋಮನಾಥ ಉಳಿಯದಲ್ಲಿ ಕಂಪೌಂಡ್ ಗೋಡೆ ಕುಸಿತಕ್ಕೊಳಗಾಗಿದೆ.
ಸೋಮೇಶ್ವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊಲ್ಯದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಮನೆಗೆ ತೀವ್ರ ಹಾನಿನ ಉಂಟಾಗಿದೆ. ಬೆಟ್ಟಂಪಾಡಿಯಲ್ಲಿ ಕಡಲ್ಕೊರೆತದ ಪರಿಣಾಮ ಮನೆಯೊಂದು ನೀರಿನಲ್ಲಿ ಕೊಚ್ಚಿ ಹೋಗುವ ಹಂತಕ್ಕೆ ತಲುಪಿದೆ. ಇಲ್ಲಿಂದ ಕುಟುಂಬವೊಂದನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಕಡಲ್ಕೊರೆತದ ಪರಿಣಾಮ ಉಚ್ಚಿಲ ಮತ್ತು ಪೆರಿಬೈಲ್ನಲ್ಲಿ ಬಹುತೇಕ ಮನೆಗಳು ಅಪಾಯದಂಚಿನಲ್ಲಿವೆ.