ಸುಬ್ರಹ್ಮಣ್ಯ, ಜು 03 (DaijiworldNews/HR): ಅತಿಥಿಯಾಗಿ ವ್ಯಕ್ತಿಯೊಬ್ಬರ ಮನೆಗೆ ಬಂದಿದ್ದಾತ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಮನೆಯ ಯಜಮಾನನಿಗೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ವ್ಯಕ್ತಿಯನ್ನು ತೋಟದ ಮಜಲು ನಿವಾಸಿ ಲೂಕೋಸ್ ಎಂದು ಗುರುತಿಸಲಾಗಿದೆ.
ಕೇರಳ ಮೂಲದ ಲೂಕೋಸ್ ಎಂಬವರು ಎಂಟು ವರ್ಷಗಳ ಹಿಂದೆ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ಜಾಗ ಖರೀದಿಸಿ ಸಂಸಾರಸಮೇತರಾಗಿ ವಾಸವಾಗಿದ್ದರು. ಆದರೆ ಕಳೆದ ಎರಡು ವರ್ಷದ ಹಿಂದೆ ಪತ್ನಿ ಬಿಟ್ಟು ಹೋಗಿದ್ದು, ಒಬ್ಬಂಟಿಯಾಗಿ ಜೀವಿಸುತ್ತಿದ್ದರು.
ಇನ್ನು ವಾರದ ಹಿಂದೆ ಲೂಕೋಸ್ ಅವರ ಮನೆಗೆ ಅತಿಥಿಯೊಬ್ಬ ಬಂದಿದ್ದು, ಇವರ ಮನೆಯಲ್ಲೇ ವಾಸವಾಗಿದ್ದ. ಇಂದು ಮುಂಜಾನೆ ವೇಳೆ ಗುತ್ತಿಗಾರಿಗೆ ತೆರಳಿದ್ದು, ಬಳಿಕ ಮನೆಗೆ ವಾಪಾಸಾಗಿದ್ದರು. ಮಧ್ಯಾಹ್ನ 3-4 ಗಂಟೆ ವೇಳೆಗೆ ಅತಿಥಿಯಾಗಿ ಮನೆಗೆ ಬಂದಿದ್ದಾತ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಲೂಕೋಸ್ ಅವರಿಗೆ ನಾಲ್ಕೈದು ಬಾರಿ ಇರಿದಿದ್ದು, ಬಳಿಕ ಪರಾರಿಯಾಗಿದ್ದಾನೆ.
ಗಾಯಗೊಂಡ ಲೂಕೋಸ್ ಪಕ್ಕದ ಮನೆಗೆ ಓಡಿಹೋಗಿದ್ದು, ಬಳಿಕ ಅಲ್ಲಿ ಗಾಯಗೊಂಡಿದ್ದ ಆತ ಕುಸಿದುಬಿದ್ದಿದ್ದ. ಬಳಿಕ ಸ್ಥಳೀಯರು ಪೋಲಿಸರಿಗೆ ಕರೆ ಮಾಡಿದ್ದು, ಕೂಡಲೇ ಸುಬ್ರಹ್ಮಣ್ಯ ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಅವರು ಯುವ ತೇಜಸ್ಸು ಅಂಬ್ಯುಲೆನ್ಸ್ ಜೊತೆ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಗಾಯಾಳು ಲೂಕೋಸ್ ಅವರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಪರಾರಿಯಾದ ಆರೋಪಿ ಪತ್ತೆಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.