ಬಂಟ್ವಾಳ, ಜು 03 (DaijiworldNews/DB): ಬಿ.ಸಿ. ರೋಡ್-ಪುಂಜಾಲಕಟ್ಟೆ ಹೆದ್ದಾರಿಯ ನಾವೂರಿನ ಬಡಗುಂಡಿಯಲ್ಲಿ ಕಾರುಗಳೆರಡರಡ ನಡುವೆ ಶುಕ್ರವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಓರ್ವ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಇನ್ನೋರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ನಯನಾಡು ನಿವಾಸಿ ಬ್ಯಾಪ್ಟಿಸ್ ಲೋಬೋ ಅವರ ಪುತ್ರ ರಾಕ್ಲಿನ್ ಲೋಬೊ (26) ಗಂಭೀರ ಗಾಯಗೊಂಡವರು. ಅವರು ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರ್ಟಿಗಾ ಮತ್ತು ರಿಟ್ಜ್ ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ರಾಕ್ಲಿನ್ ಮಂಗಳೂರಿನಿಂದ ನಯನಾಡಿನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ವಾಮದಪದವಿನಲ್ಲಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಎರ್ಟಿಗಾ ಕಾರು ಬಡಗುಂಡಿಯಲ್ಲಿ ರಿಟ್ಜ್ ಕಾರಿಗೆ ಢಿಕ್ಕಿ ಹೊಡೆದಿದೆ. ಎರ್ಟಿಗಾದಲ್ಲಿ ಮಂಜೇಶ್ವರ ಮೂಲದ 12 ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರಿಗೂ ಗಾಯಗಳಾಗಿವೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಿಟ್ಜ್ ಕಾರಿನ ಎಂಜಿನ್ ಹೆದ್ದಾರಿ ಪಕ್ಕದಲ್ಲಿರುವ ತೋಡಿಗೆ ಬಿದ್ದಿತ್ತು. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ. ರೋಡ್-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ದಿಗೊಂಡ ಬಳಿಕ ಈ ಮಾರ್ಗವಾಗಿ ತೆರಳುಯವ ವಾಹನಗಳು ಅತಿವೇಗದಿಂದ ಹೋಗುತ್ತಿರುವುದು ದುರಂತಗಳು ಸಂಭವಿಸುವ ಸಾಧ್ಯತೆಯನ್ನು ಹೆಚ್ಚಿಸಿವೆ. ಹೆದ್ದಾರಿನಲ್ಲಿ ತಿರುವುಗಳಿದ್ದು, ಅತಿ ವೇಗ ಅಪಾಯ ತಂದೊಡ್ಡಲು ಕಾರಣವಾಗುತ್ತಿವೆ. ಬಡಗುಂಡಿಯಲ್ಲಿ ಅನೇಕ ಅಪಘಾತಗಳು ನಡೆಯುತ್ತಿವೆ ಎನ್ನಲಾಗಿದೆ.