ಕುಂದಾಪುರ, ಜು 03 (DaijiworldNews/DB): ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯ ಜಾಡು ಹಿಡಿದು ಕುಂದಾಪುರಕ್ಕೆ ಬಂದಿದ್ದ ಕೊಪ್ಪ ಪೊಲೀಸರ ಮೇಲೆ ಇಬ್ಬರು ಹಲ್ಲೆ ಮಾಡಿದ ಘಟನೆ ಶನಿವಾರ ನಡೆದಿದೆ. ಈರ್ವರ ಪೈಕಿ ಒಬ್ಬನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಮೂಲದ ಅಬ್ದುಲ್ ರವೂಫ್ ಮತ್ತು ನಿಜಾಮ್ ಹಲ್ಲೆ ನಡೆಸಿದ ಆರೋಪಿಗಳು. ಈ ಪೈಕಿ ಅಬ್ದುಲ್ ರವೂಫ್ನನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಗುಲ್ವಾಡಿಯ ಡ್ಯಾನಿಶ್ ಎಂಬಾತನು ಕೊಪ್ಪದಲ್ಲಿ ನಡೆದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ಹೀಗಾಗಿ ಆತನ ಪತ್ತೆಗೆ ಕೊಪ್ಪ ಪೊಲೀಸರು ಕುಂದಾಪುರಕ್ಕೆ ಬಂದಿದ್ದರು. ಕೊಪ್ಪ ಎಸ್ಐ ಶ್ರೀನಾಥ್ ರೆಡ್ಡಿ, ಎಎಸ್ಐ ಗಂಗ ಶೆಟ್ಟಿ, ಸಿಬಂದಿ ಪ್ರಶಾಂತ್, ಅಮಿತ್ ಚೌಗಳೆ ತಂಡದಲ್ಲಿದ್ದರು. ಡ್ಯಾನಿಶ್ ಮನೆಗೆ ತೆರಳಿ ಪೊಲೀಸರು ವಿಚಾರಿಸಿದಾಗ ಆತ ವಾಹನದಲ್ಲಿ ಕೋಟೇಶ್ವರ ಕಡೆಗೆ ಹೋಗಿರುವುದಾಗಿ ಆತನ ತಂದೆ ಇಕ್ಬಾಲ್ ಹೇಳಿದ್ದರು. ಹೀಗಾಗಿ ಇಕ್ಬಾಲ್ನನ್ನು ಕರೆದುಕೊಂಡು ಪೊಲೀಸರು ಕೋಟೇಶ್ವರದ ಕಟ್ಕೇರಿ ಬಳಿ ಹೋಗುತ್ತಿದ್ದ ವೇಳೆ ಸ್ಕೂಟಿಯಲ್ಲಿ ಬಂದ ಆರೋಪಿಗಳಿಬ್ಬರು ಪೊಲೀಸ್ ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಬಂದು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾವು ಪೊಲೀಸರು ಎಂದು ಪೊಲೀಸರು ಹೇಳಿದಾಗ ನೀವು ಯಾರಾದರೂ ನಮಗೇನು, ನಮ್ಮ ಮನೆಗೆ ಬಂದು ಯಾಕೆ ಮರ್ಯಾದೆ ತೆಗೆಯುತ್ತೀರಿ, ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದೆಲ್ಲಾ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, ಅಬ್ದುಲ್ ರವೂಫ್ ಎಂಬಾತನು ಎಸ್ಐ ಶ್ರೀನಾಥ್ ಅವರ ತಲೆಗೆ ಗುರಿಯಿಟ್ಟು ಕಲ್ಲೆಸೆದಿದ್ದು, ಅದು ಎಎಸ್ಐ ಗಂಗ ಶೆಟ್ಟಿ ಅವರ ಸನಿಹವೇ ಹಾದು ಹೋಗಿತ್ತು. ನಿಜಾಮ್ ಪೊಲೀಸರನ್ನು ಎಳೆದಾಡಿದ್ದಾನೆ. ಅಲ್ಲದೆ ಐಡಿ ಕಾರ್ಡ್ ತೋರಿಸಿದರೂ ಪೊಲೀಸರಿಗೆ ತೆರಳಲು ಬಿಡದೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಬಳಿಕ ಸಾರ್ವಜನಿಕರು ಸೇರಿದಾಗ ಇಬ್ಬರೂ ಪರರಾರಿಯಾಗಿದ್ದಾರೆ ಎಂದು ಕೊಪ್ಪ ಎಸ್ಐ ಶ್ರೀನಾಥ್ ರೆಡ್ಡಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಿಬ್ಬರ ವಿರುದ್ದ ಐಪಿಸಿ ಸೆಕ್ಷನ್ 441, 307, 504, 353, ಹಾಗೂ 34ರಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೋರ್ವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.