ವಿಶೇಷ ವರದಿ: ಹರ್ಷಿಣಿ ಉಡುಪಿ
ಉಡುಪಿ, ಜೂ 02 (DaijiworldNews/HR): ನಗರಸಭೆಯ ವ್ಯಾಪ್ತಿಯ ಪರ್ಕಳ ವಾರ್ಡಿನ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್ ವಾರ್ಡಿನಲ್ಲಿ ಮಳೆಗಾಲದಲ್ಲಿ ರಸ್ತೆ ಅಗೆದು ಸಾರ್ವಜನಿಕರಿಗೆ ದಾರಿಯಲ್ಲಿ ನಡೆಯದಂಥ ಸ್ಥಿತಿ ನಿರ್ಮಾಣವಾಗಿದೆ.
ಎರಡು ತಿಂಗಳ ಹಿಂದಿನಿಂದಲೂ ರಸ್ತೆ ನಿರ್ಮಾಣಕ್ಕೆ ಹಿಟಾಚಿಯಿಂದ ಅಗೆಯುತ್ತಲೇ ಇದ್ದಾರೆ. ಈಗ ಮಳೆಗಾಲ ಆರಂಭವಾಗಿದೆ. ಧಾರಾಕಾರ ಮಳೆ ಬೀಳುತ್ತಿದೆ. ಅಗೆದ ರಸ್ತೆ ಕಂಬಳದ ಕೆಸರು ಗದ್ದೆಯಂತಾಗಿದೆ. ಪರ್ಕಳದಿಂದ ಕೋಡಂಗೆಗೆ ಹೋಗಲು ಬೇರೆ ಪರ್ಯಾಯ ರಸ್ತೆಯೇ ಇಲ್ಲ. ಬಿಸಿಲು ಇರುವಾಗ ಅಷ್ಟೊಂದು ಸಮಸ್ಯೆ ಎದುರಾಗುತ್ತಿರಲಿಲ್ಲ. ಕಳೆದೆರಡು ವಾರದಿಂದ ಸುರಿಯುತ್ತಿದ್ದ ಮಳೆಗೆ ಜನರು ಕೆಸರೆರೆಚಾಟ ಮಾಡಿಕೊಂಡು ಮಕ್ಕಳು ಶಾಲೆಗೆ, ದೊಡ್ಡವರು ಕೆಸರಾದ ಬಟ್ಟೆಯಲ್ಲಿಯೇ ಕೆಲಸಕ್ಕೆ ಹೋಗುವಂತಾಗಿದೆ. ಮಳೆಗಾಲದೊಳಗೆ ರಸ್ತೆ ಕಾಮಗಾರಿ ಮುಗಿಸಬೇಕು ಅಥವಾ ರಸ್ತೆಯಲ್ಲಿ ಮಣ್ಣು ಅಗೆಯಬಾರದು. ಡಿಸಿಯವರೇ ಮಳೆಗಾಲದಲ್ಲಿ ರಸ್ತೆ ಅಗೆತಕ್ಕೆ ನಿಷೇಧ ಹೇರಿದ್ದರೂ ಇಲ್ಲಿ ಮಾತ್ರ ಅಗೆಯುತ್ತಲೇ ಇದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನವೂ ನಗರಸಭೆಗೆ ಇರುವುದಿಲ್ಲವೇ?
ಸುಮಾರು ಒಂದೂವರೆ ಕಿ.ಮೀ ನಷ್ಟು ದೂರ ಎರಡು ಬಸ್ ಹೋಗುವಷ್ಟು ಅಗಲವಾಗಿ ಅಗೆದಿದ್ದಾರೆ. ಅಲ್ಲಿನ ಸ್ಥಳೀಯರು ಶನಿವಾರದಂದು ಇದರ ವಿರುದ್ಧ.ಬಿಎಸ್ಎನ್ಎಲ್ ಕಚೇರಿಯ ಸಮೀಪದಿಂದ ಪಾದಯಾತ್ರೆ ನಡೆಸಿದರು. ನಂತರ ಸ್ಥಳೀಯರ ಆಗ್ರಹದಿಂದ ರಸ್ತೆ ಅಗೆತ ಸ್ಥಗಿತಗೊಳಿಸಲಾಯಿತು.
ಉಡುಪಿ ನಗರಸಭೆಯ ನಗರೋತ್ಥಾನದ ಉಳಿಕೆಯ ಅನುದಾನದಿಂದ ಮಳೆಗಾಲದಲ್ಲಿಯೇ ಕಾಮಗಾರಿ ಆರಂಭಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ವಾಹನ ಚಾಲಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ವೃದ್ದರಿಗೆ ನಡೆಯಲಾರದಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ನಗರೋತ್ಥಾನ ಯೋಜನೆಯಡಿಯಲ್ಲಿ ಸುಮಾರು ಒಂದು ಕೋಟಿ ಅನುದಾನದಲ್ಲಿ ಈ ರಸ್ತೆಯನ್ನು ಅಗಲೀಕರಣಗೊಳಿಸಲು ನಿರ್ಧರಿಸಲಾಗಿತ್ತು. ಪ್ರಸ್ತುತ 5.5 ಮೀಟರ್ ಅಗಲವಿರುವ ರಸ್ತೆಯನ್ನು 7.5 ಮೀಟರ್ನಷ್ಟು ಅಗಲೀಕರಣಗೊಳಿಸಲು ಯೋಜನೆ ಕೂಡಾ ಸಿದ್ದಪಡಿಸಲಾಗಿತ್ತು. ಆಮೆಗತಿಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಈಗಾಗಲೇ ಮೂರು ಲೋಡ್ ಸಿಮೆಂಟ್ ಬಂದಿದ್ದು ಗಟ್ಟಿಯಾಗುತ್ತಿದೆ
ಈ ರಸ್ತೆ ಮುತ್ತಲೂ ಸುಮಾರು ೧೦೦ ಮನೆ ಇರುವುದರಿಂದ ಇಲ್ಲಿನ ವಾಸಿಗಳಿಗೆ ಇದೊಂದೆ ಮುಖ್ಯ ಸಂಪರ್ಕ ರಸ್ತೆ ಆಗಿರುವುದರಿಂದ ಜನ ನಿತ್ಯ ಓಡಾಡಲು ಪರದಾಡುವಂತಾಗಿದೇ.
ಶುಕ್ರವಾರ ಇಲ್ಲಿನ ನಿವಾಸಿಯೋರ್ವರು ಹೃದಯಾಘಾತದಿಂದ ನಿಧನರಾಗಿದ್ದು , ಆಸ್ಪತ್ರೆಗೆ ಕೊಂಡೊಯ್ಯಲು ಆಂಬುಲೆನ್ಸ್ ಅಲ್ಲ, ಒಂದು ರಿಕ್ಷಾದವರೂ ಕೂಡ ಬರಲು ಕೇಳುತ್ತಿಲ್ಲ. ಕೊನೆಗೆ ಸ್ಟೆಚ್ಚರ್ ನ ಸಹಾಯದಿಂದ ಕೊಂಡೊಯ್ಯಲಾಯಿತು ಎಂದು ಸ್ಥಳೀಯರು ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಓಟು ಕೇಳುವಾಗ ಎಲ್ಲರೂ ಬರುತ್ತಾರೆ, ಸಮಸ್ಯೆ ಎದುರಾದಾಗ ಯಾರೂ ಬರಲ್ಲ ಅಂತಿದ್ದಾರೆ ಇಲ್ಲಿನ ಜನ.
ರಸ್ತೆಯ ಎರಡು ಬದಿಯಲ್ಲಿದ್ದ ಚರಂಡಿಯನ್ನು ರಸ್ತೆಯ ಅಗಲೀಕರಣಕ್ಕಾಗಿ ಮುಚ್ಚಿ ಹಾಕಲಾಗಿದ್ದು, ಮಳೆಯ ನೀರು ಇಲ್ಲಿನ ನಿವಾಸಿಗಳ ಅಂಗಳದಲ್ಲೇ ಹರಿದು ಹೋಗುತ್ತಿದೆ ಎಂದು ಜ್ಯೋತಿಯವರು ತಮ್ಮ ಅಳಲನ್ನು ತೋಡಿಕೊಂಡರು. ಅಷ್ಟೇ ಅಲ್ಲದೆ ಇಲ್ಲಿನ ಕೆಸರು ನೀರು ಬಾವಿಗೂ ಹರಿದು ಕುಡಿಯಲು ಯೋಗ್ಯವಲ್ಲವಾಗಿದೆ.
ನಗರಸಭೆಯ ಅಧ್ಯಕ್ಷರಾದ ಸುಮಿತ್ರಾ ನಾಯಕ್ , ಧಾಯ್ಜಿವರ್ಲ್ಡ್ ಗೆ ಪ್ರತಿಕ್ರಿಯಿಸಿ, 'ಕಾಮಗಾರಿಯ ಬದಲಾವಣೆಯಿಂದ ಕೆಲಸ ಸ್ವಲ್ಪ ತಡವಾಗಿದ್ದು ಸಾರ್ವಜನಿಕರು ಸಹಕರಿಸಬೇಕು. ಸೋಮವಾರ ರಸ್ತೆಗೆ ಜಲ್ಲಿ ಹಾಕಿಸಿ ಕಾಮಗಾರಿ ಪ್ರಾರಂಭಿಸಲು ಇಂಜಿನಿಯರ್ ಗೆ ಸೂಚನೆ ನೀಡಲಾಗಿದೆ. ಮಳೆಗಾಲದೊಳಗೆ ರಸ್ತೆ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.