ಮಂಗಳೂರು, ಜೂ 02 (DaijiworldNews/HR): ಮಾದಕ ವಸ್ತುಗಳ ಬಳಕೆ ಸಾಮಾಜಿಕ ಪಿಡುಗಾಗಿದ್ದು, ಕಾಲೇಜುಗಳ ಸುತ್ತಾ ಮುತ್ತಾ ಆ ವಸ್ತುಗಳ ಬಳಕೆ ಅಥವಾ ಮಾರಾಟವಾಗುತ್ತಿದ್ದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ವಿದ್ಯಾಥಿಗಳಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಸೇಂಟ್ ಅಲೋಶಿಯಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಜು.2ರ ಶನಿವಾರ ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಿಕೆ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮಾರಕವಾಗಿರುವ ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸುವಲ್ಲಿ ಯುವಕರು ಕೈಜೋಡಿಸಬೇಕು, ಅಂತಹಾ ಚಟುವಟಕೆಗಳನ್ನು ಕಂಡವರು ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳಿಗೆ ಮಾಹಿತಿ ನೀಡಬೇಕು, ಆ ಮೂಲಕ ಯುವಕರು ಜಿಲ್ಲಾಡಳಿತ ಮತ್ತು ಸಮಾಜದ ಕಣ್ಣು ಹಾಗೂ ಕಿವಿಗಳಂತೆ ಕೆಲಸ ಮಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.
ಹದಿಹರೆಯದಲ್ಲಿ ಯುವ ಜನತೆ ಸ್ವ-ನಿಯಂತ್ರಣ ಕಳೆದುಕೊಂಡು ಅಥವಾ ಸಹವಾಸ ದೋಷದಿಂದ ಮಾದಕ ವಸ್ತುಗಳೆಡೆಗೆ ವಾಲುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲೂ ಯುವಕರನ್ನು ದಾರಿ ತಪ್ಪಿಸುವ, ಮಾದಕ ದ್ರವ್ಯಗಳನ್ನು ಪೂರೈಸುವ ಕೆಟ್ಟ ಜಾಲಗಳಿಂದ ಹಾಗೂ ಕೆಟ್ಟ ಮಾರ್ಗಗಳಿಗೆ ಎಳೆಯುವ ಗೆಳೆಯರಿಂದ ದೂರವಿರುವಂತೆ ಅವರು ಸಲಹೆ ನೀಡಿದರು.
ಮಾನಸಿಕವಾಗಿ ಮತ್ತು ದೈಹಿಕವಾಗಿ ಬೆಳವಣಿಗೆ ಹೊಂದುತ್ತಿರುವ ಈ ಸಮಯದಲ್ಲಿ ಯುವಕರು ಚಟಗಳಿಂದ ದೂರವಿರಬೇಕು, ಉತ್ತಮ ಶಿಕ್ಷಣ ಪಡೆದು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಅಥವಾ ಇನ್ನಿತರ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು, ದೇಶದ ಬದಲಾವಣೆಯ ಹೊಣೆ ಕೇವಲ ಅಧಿಕಾರಿಗಳು ಅಥವಾ ರಾಜಕಾರಣಿಗಳ ಮೇಲಿಲ್ಲ ಪ್ರತಿಯೊಬ್ಬ ಯುವಕರ ಮೇಲಿದೆ, ಕಷ್ಟ ಪಟ್ಟು ಓದಿಸುವ, ನಮ್ಮ ಬಗ್ಗೆ ಅಪಾರ ನಂಬಿಕೆ-ಕನಸುಗಳನ್ನು ಹೊಂದಿರುವ ತಂದೆ-ತಾಯಿಗಳು ಹೆಮ್ಮೆ ಪಡುವಂತೆ ಬದುಕುವಂತೆ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಮಾದಕ ವ್ಯಸನದಿಂದಾಗಿ ಅಪರಾಧಗಳು ಸಂಭವಿಸುತ್ತವೆ, ಪರೋಕ್ಷವಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ, ದೇಶದ ಸಂಪತ್ತು ಎಂದು ಬಿಂಬಿತವಾಗಿರುವ ಯುವ ಜನತೆ ಸರಿ ದಾರಿ ಹಿಡಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಲು ಹೇಗೆ ಗೆಳೆಯರು ಕಾರಣರಾಗುತ್ತಾರೋ ಹಾಗೇ ತಪ್ಪು ದಾರಿ ಹಿಡಿಯಲೂ ಕೂಡ ಕೆಟ್ಟ ಸ್ನೇಹಿತರ ಸಂಗ ಕಾರಣವಾಗುತ್ತದೆ, ಆದ್ದರಿಂದ ಉತ್ತಮ ಗೆಳೆಯ ಒಡನಾಟ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿ ಜೀವನದಲ್ಲಿ ನಾವು ಬೆಳೆಸಿಕೊಳ್ಳುವ ಹವ್ಯಾಸಗಳೇ ನಮ್ಮ ಬದುಕನ್ನು ನಿರ್ಧರಿಸುತ್ತದೆ, ಆದ್ದರಿಂದ ದೇಹಕ್ಕೂ, ದೇಶಕ್ಕೂ ಉತ್ತಮವೆನಿಸುವ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಮಾನಸಿಕ ಆರೋಗ್ಯ ತಜ್ಞ ಡಾ.ಶಾರಣ್ಯ ಶೆಟ್ಟಿ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಸುದರ್ಶನ್, ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಮಾರ್ಟಿಸ್ ಎಸ್.ಜೆ., ಕಾಲೇಜಿನ ಕುಲ ಸಚಿವ ಅಲ್ವಿನ್ ಡಿ'ಸೋಜ, ಎನ್.ಎಸ್.ಎಸ್ ಅಧಿಕಾರಿ ಪ್ರೀಮ ತಾವ್ರೋ ಸೇರಿದಂತೆ ವಿದ್ಯಾರ್ಥಿಗಳಿದ್ದರು.