ಸುಳ್ಯ, ಜು 02 (DaijiworldNews/DB): ಸುಳ್ಯ, ಸಂಪಾಜೆ, ಮಡಿಕೇರಿ ಭಾಗಗಳಲ್ಲಿ ಪದೇ ಪದೇ ಜನರಿಗೆ ಭೂಕಂಪನದ ಅನುಭವ ಆಗುತ್ತಿದ್ದು, ಇದೀಗ ಚೆಂಬು, ಗೂನಡ್ಕ ತೊಡಿಕಾನ, ದೊಡ್ಡಕುಮೇರಿ, ಪೆರಾಜೆ ಭಾಗಗಳಲ್ಲಿ ಆರನೇ ಭಾರಿ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ.
ಚೆಂಬು, ಗೂನಡ್ಕ ಭಾಗದಲ್ಲಿ ಶನಿವಾರ ಮಧ್ಯಾಹ್ನ ಸುಮಾರು1.20ರಿಂದ 1.25ರ ನಡುವೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಕಲ್ಲುಗುಂಡಿ ಭಾಗದ ಕೆಲವು ಮನೆಗಳಿಗೂ ಶಬ್ದ ಕೇಳಿದೆ ಎಂದು ತಿಳಿದು ಬಂದಿದೆ.
ಚೆಂಬು ಭೂಕಂಪನದ ಕೇಂದ್ರ ಬಿಂದುವಾಗಿದೆ. ಪದೇ ಪದೇ ಭೂಕಂಪನ ಸಂಭವಿಸುತ್ತಿರುವುದರಿಂದ ಜನ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಈ ನಡುವೆ ಭಾರೀ ಮಳೆಯಿಂದಾಗಿ ಈ ಭಾಗದಲ್ಲಿ ಭೂಕುಸಿತವೂ ಉಂಟಾಗಿದ್ದು, ಜನ ಸಂಕಷ್ಟಕ್ಕೊಳಗಾಗಿದ್ದಾರೆ.
1.8 ತೀವ್ರತೆ ದಾಖಲು
ಮಧ್ಯಾಹ್ನ 1.21 ನಿಮಿಷ 50 ಸೆಕೆಂಡಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆ ದಾಖಲಾಗಿದೆ. 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಇಲ್ಲಿವರೆಗೆ ಸಂಭವಿಸಿದ ಭೂಕಂಪದಲ್ಲಿ ಚೆಂಬು ಭೂಕಂಪದ ಕೇಂದ್ರ ಬಿಂದುವಾಗಿದ್ದರೆ, ಈ ಬಾರಿ ತೊಡಿಕಾನದ ದೊಡ್ಡಕುಮೇರಿ ಭೂಕಂಪದ ಕೇಂದ್ರ ಬಿಂದು ಆಗಿದೆ.