ಮಂಗಳೂರು,ಜು 02 (DaijiworldNews/MS): ಬ್ರಿಟಿಷರನ್ನು ಭಾರತದಿಂದ ಹೊರಗಟ್ಟುವಲ್ಲಿ ಬ್ರಿಟಿಷರೇ ಹೊರತಂದ ಬೆಂಗಾಲ್ ಗೆಝೆಟ್ ಪತ್ರಿಕೆ ಆ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇಂದು ಕೂಡಾ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕಾ ಮಾಧ್ಯಮ ಹಾಗೂ ಪತ್ರಕರ್ತರ ಪಾತ್ರ ಪ್ರಮುಖ ಎಂದು ದ.ಕ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್.ಆರ್. ಅಭಿಪ್ರಾಯಪಟ್ಟರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್ಕ್ಲಬ್ನಲ್ಲಿ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ವಿಜೇತ ನಾ. ಕಾರಂತ ಪೆರಾಜೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಖಾಸಗಿ ದೃಶ್ಯ ಮಾಧ್ಯಮಗಳ ಉಗಮದ ಬಳಿಕ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಬೆಳವಣಿಗೆಯಾಗಿದ್ದು, ಇದೀಗ ಮೊಬೈಲ್ ಜರ್ನಲಿಸಂ ಕೂಡಾ ಜನರಿಗೆ ಹತ್ತಿರವಾಗುತ್ತಿದೆ. ಏನೇ ಬದಲಾವಣೆಯಾದರೂ ಪತ್ರಕರ್ತರು ಸತ್ಯದ ಪರವಾಗಿ ವರದಿ ಮಾಡಿ ಜನರಿಗೆ ನೈಜ ವಿಷಯಗಳನ್ನು ತಿಳಿಸಿದಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಕೋವಿಡ್ ನಂತರ ಮಾಧ್ಯಮದ ಸ್ಥಿತ್ಯಂತರ'ದ ಕುರಿತು ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್ ಮಾತನಾಡಿದರು.
ಬಹುಕೌಶಲ್ಯ ಇಂದಿನ ಮಾಧ್ಯಮದ ಅಗತ್ಯ. ಆರ್ಥಿಕ ಬಿಕ್ಕಟ್ಟು, ಕೊರೋನ ಸಾಂಕ್ರಾಮಿಕದ ನಂತರ ಸಾಕಷ್ಟು ಸಂದಿಗ್ಧತೆಗೆ ಪತ್ರಿಕಾ ರಂಗ ಒಳಗಾಗಿದ್ದರೂ ನವ ಮಾಧ್ಯಮವು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಪತ್ರಕರ್ತರಲ್ಲಿ ಇಂದು ಕೌಶಲ್ಯ ಅತೀ ಪ್ರಮುಖ ಪಾತ್ರ ವಹಿಸುತ್ತಿದೆ. ಬಹುಕೌಶಲ್ಯ ಇಂದಿನ ಮಾಧ್ಯಮದ ಅಗತ್ಯವಾಗಿದೆ ಎಂದು ಕುಮಾರನಾಥ್ ಹೇಳಿದರು.
ತನಗೆ ದೊರಕಿರುವ ಪ್ರಶಸ್ತಿ ಹಳ್ಳಿಗೆ ಸಂದ ಮಾನ. ಹಳ್ಳಿಗಳಲ್ಲಿ ಇಂದಿಗೂ ಮಾನವೀಯ ಮೌಲ್ಯ, ಸೌಹಾರ್ದತೆ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದ್ದು, ಆ ನಿಟ್ಟಿನಲ್ಲಿ ಬರೆಯಲ್ಪಟ್ಟ ಲೇಖನಕ್ಕೆ ಈ ಗೌರವ ಸಂದಿರುವುದು ಸಂತಸ ನೀಡಿದೆ ಎಂದು ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಸ್ವೀಕರಿಸಿದ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಅಭಿಪ್ರಾಯಿಸಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ನ ಅಧ್ಯಕ್ಷ ರಾಮಕೃಷ್ಣ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಬಿ.ಎನ್. ವಂದಿಸಿದರು.